ತ್ರಿಶೂರ್(ಕೇರಳ): ಸಂಪೂರ್ಣವಾಗಿ ಅರಳಿನಿಂತ ಕಮಲ ಹೂಗಳು ದಾರಿಹೋಕರ ಕಣ್ಣಿಗೆ ಹಬ್ಬ ನೀಡುತ್ತಿದೆ. ಆದರೆ ಜೀವನಕ್ಕಾಗಿ ಈ ಹೂವುಗಳನ್ನು ಪೋಷಿಸುವ ಕಮಲ ಬೆಳೆವ ರೈತರು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ.
ಕೊವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕಮಲದ ಹೂವುಗಳ ಮಾರಾಟ ಸಂಪೂರ್ಣವಾಗಿ ನಿಂತುಹೋಗಿದೆ.
ಸಾಮಾನ್ಯವಾಗಿ, ಅರ್ಧ ಅರಳಿದ ಕಮಲದ ಮೊಗ್ಗುಗಳನ್ನು ಕಾಂಡದಿಂದ ಕತ್ತರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕಮಲದ ಮೊಗ್ಗುಗಳನ್ನು ಹೆಚ್ಚಾಗಿ ದೇವಾಲಯಗಳಲ್ಲಿ ಪೂಜೆಗಳಿಗಾಗಿ ಮತ್ತು ದೇವತೆಗಳಿಗೆ ಹೂವಿನ ಹಾರಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ದೇವಾಲಯದ ಉತ್ಸವಗಳು. ಜಾತ್ರೆಗಳನ್ನು, ಗಮನದಲ್ಲಿಟ್ಟುಕೊಂಡು ಮಾರಾಟವು ಹೆಚ್ಚಾಗುವ ಸಮಯದಲ್ಲಿ, ಈ ಅನಿರೀಕ್ಷಿತ ಸನ್ನಿವೇಶ ರೈತರ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಕಮಲದ ಹೂವುಗಳನ್ನು ಕೆಲವು ಗಿಡಮೂಲಿಕೆ ಔಷಧಿಗಳಲ್ಲಿಯೂ ಬಳಸಲಾಗುತ್ತಿತ್ತು. ಕಳೆದ 15 ವರ್ಷಗಳಿಂದ ತ್ರಿಶೂರ್‌ನ ಪುಲ್ಲು ಗ್ರಾಮದಲ್ಲಿ ಕೆಲವು ಎಕರೆ ಪ್ರದೇಶದ ಭತ್ತದ ಗದ್ದೆಗಳಲ್ಲಿ ಕಮಲವನ್ನು ಕೃಷಿ ಮಾಡುತ್ತಿರುವ ವೇಲಮನ್‌ಪಾಡಿಯ ವೇಣುಗೋಪಾಲನ್ ಮತ್ತು ತ್ರಿಶೂರ್‌ನ ಅರನಟುಕರ ಮೂಲದ ಸತ್ಯನ್ ಎಂಬ ಇಬ್ಬರು ಕಮಲ ಬೆಳೆಯುವ ರೈತರು. ಇವರು ಒಂದು ಹೂವಿಗೆ 3 ರಿಂದ 4 ರೂಗಳಂತೆ ಮಾರಾಟ ಮಾಡುತ್ತಿದ್ದರು. ಇವರು ಬೆಳೆದ ಹೂಗಳು ಕೇರಳದ ಅನೇಕ ಸ್ಥಳಗಳಿಗೆ ಮತ್ತು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಇಷ್ಟು ವರ್ಷಗಳಲ್ಲಿ ತಾವು ಎಂದಿಗೂ ಇಂತಹ ಬಿಕ್ಕಟ್ಟನ್ನು ಎದುರಿಸಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.