ನವದೆಹಲಿ: ಕೋವಿಡ್19 ವೈರಸ್ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ, ರಾಜ್ಯ, ಕೇಂದ್ರಾಡಳಿತ ವ್ಯಾಪ್ತಿ ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಿದ್ರೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದೀಗ ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.
170 ಹಾಟ್‌ಸ್ಪಾಟ್ ಜಿಲ್ಲೆಗಳನ್ನು ಕೆಂಪು ವಲಯ, ಕ್ಲಸ್ಟರ್‌ಗಳು ಮತ್ತು ಸೋಂಕು ಮುಕ್ತ ಜಿಲ್ಲೆಗಳ ಜೊತೆಯಲ್ಲಿ 207 ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳನ್ನು ಹಸಿರು ವಲಯ ಎಂದು ಆರೋಗ್ಯ ಸಚಿವಾಲಯ ವರ್ಗೀಕರಿಸಿದೆ.
ಅತಿ ಹೆಚ್ಚು ಕೋವಿಡ್ ಕೇಸ್‌ಗಳು ದಾಖಲಾಗಿರುವ ಹಾಗೂ ಇನ್ನೂ ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಹೇಳಲಾಗುತ್ತದೆ. ಇದರಲ್ಲಿ ಮತ್ತೆ ಎರಡು ವಿಭಾಗಗಳನ್ನು ಮಾಡಲಾಗಿದ್ದು, ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ 123 ಹಾಟ್‌ಸ್ಪಾಟ್ ಜಿಲ್ಲೆಗಳು ಹಾಗೂ 47 ಹಾಟ್ ಸ್ಪಾಟ್ ಕ್ಲಸ್ಟರ್‌ಗಳೆಂದು ವಿಂಗಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಮುಂದಿನ 14 ದಿನಗಳಲ್ಲಿ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗದಿದ್ದರೆ ಅವುಗಳನ್ನು ಆರೆಂಜ್ ಝೋನ್ ಆಗಿ ಪರಿವರ್ತಿಸಲಾಗುತ್ತದೆ. ಆರೆಂಜ್ ಝೋನ್ ಆದ ನಂತರ ಮುಂದಿನ 14 ದಿನಗಳಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗದಿದ್ರೆ ಗ್ರೀನ್ ಝೋನ್ ಆಗಿ ಪರಿವರ್ತನೆಯಾಗಲಿವೆ ಎಂದು ಹೇಳಿದೆ. ದೇಶದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಒಂದೇ ಜಿಲ್ಲೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುವ ಜಿಲ್ಲೆಯನ್ನು ರೆಡ್ ಝೋನ್ ಎನ್ನಲಾಗಿದೆ.
ರೆಡ್ ಝೋನ್ ವಲಯದಲ್ಲಿರುವ ಟಾಪ್ 5 ಸಿಟಿಗಳು:
- ಮುಂಬೈ (873 ಪ್ರಕರಣಗಳು)
- ದಕ್ಷಿಣ ದೆಹಲಿ (332 ಪ್ರಕರಣಗಳು)
- ಹೈದರಾಬಾದ್ (213 ಪ್ರಕರಣಗಳು)
- ಜೈಪುರ (170 ಪ್ರಕರಣಗಳು)
- ಕಾಸರಗೋಡು (155 ಪ್ರಕರಣಗಳು)
ಕೆಂಪು ವಲಯದ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಿ ಮತ್ತಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಜೊತೆಗೆ ಆಯಾ ರಾಜ್ಯಗಳಿಗೂ ಕೂಡ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ಜಿಲ್ಲೆಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ.