ವಿಶ್ವಾದ್ಯಂತ 2.6 ಮಿಲಿಯನ್ಗೂ ಅಧಿಕ ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಒಟ್ಟಾರೆ 1,84,000 ಕ್ಕೂ ಅಧಿಕ ಜನರನ್ನು ಈ ಮಹಾಮಾರಿ ಮೃತ್ಯುಪಾಶದತ್ತ ಕೊಂಡೊಯ್ದಿದೆ. ಸದ್ಯ ಜಗತ್ತಿನ 200 ದೇಶಗಳಲ್ಲಿ ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನು ಚಾಚುತ್ತ, ಮಾನವರ ದೈನಂದಿಕ ಜೀವನವನ್ನೇ ಬಹುತೇಕ ಸ್ಥಗಿತಗೊಳಿಸಿದೆ.
ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಜಗತ್ತಿನಲ್ಲಿ ಜೀವ ಹಾಗೂ ಜೀವನೋಪಾಯಗಳೆರಡಕ್ಕೂ ಕುತ್ತು ಬಂದಿದ್ದು, ಹಸಿವಿನ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ವಿಶ್ವದಾದ್ಯಂತ ಸುಮಾರು 130 ಮಿಲಿಯನ್ಗೂ ಜನ ಹೆಚ್ಚುವರಿಯಾಗಿ ಹಸಿವಿನ ಸಂಕಟಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮದ (World Food Programme - WFP) ಸಮೀಕ್ಷೆ ತಿಳಿಸಿದೆ. ಈಗಾಗಲೇ ಖಾಲಿ ಹೊಟ್ಟೆಯಿಂದ ಮಲಗುತ್ತಿರುವ 821 ಮಿಲಿಯನ್ ಜನರ ಪಟ್ಟಿಗೆ ಈ 130 ಮಿಲಿಯನ್ ಜನ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದ್ದಾರೆ.
ಕೋವಿಡ್ ಸಂಕಷ್ಟದಿಂದಾಗುತ್ತಿರುವ ಸಮಸ್ಯೆಗಳು ಇಡೀ ಜಗತ್ತಿಗೆ ಆತಂಕ ತಂದೊಡ್ಡಿವೆ. ಇಡೀ ಜಗತ್ತು ಒಂದಾಗಿ, ಎಲ್ಲರೂ ತಮ್ಮ ಬಳಿ ಇರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲೇಬೇಕಿದೆ. ಇದಕ್ಕೂ ಮುನ್ನ ವಿವಿಧ ದೇಶಗಳಲ್ಲಿ ಕೊರೊನಾ ಹರಡುವಿಕೆ ಯಾವ ರೀತಿಯಾಗಿದೆ ಎಂಬುದನ್ನು ತಿಳಿಯುವುದು ಅಗತ್ಯ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಪರಿಣಾಮ ವಿಭಿನ್ನವಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತದ ಮೇಲೆ ಕೊರೊನಾ ವೈರಸ್ ಪರಿಣಾಮ ಬೇರೆ ರೀತಿಯೇ ಇದೆ. ಕೊರೊನಾ ವೈರಸ್ ಹರಡುವಿಕೆಯ ಆರಂಭ ಹಾಗೂ ನಂತರದ ಬೆಳವಣಿಗೆಯ ಹಂತಗಳನ್ನು ತಿಳಿಯುವುದು ಈ ಸಮಯದಲ್ಲಿ ಅಗತ್ಯವಾಗುತ್ತದೆ.
ಎಲ್ಲಕ್ಕೂ ಮೊದಲು ಕೊರೊನಾ ವೈರಸ್ ಚೀನಾ ದೇಶದಲ್ಲಿ ಪತ್ತೆಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಆದರೆ ಅಮೆರಿಕ, ಫ್ರಾನ್ಸ್, ಜರ್ಮನಿ, ಯುಕೆ, ಇಟಲಿ ಹಾಗೂ ಭಾರತ ದೇಶಗಳಲ್ಲಿ ಈ ವೈರಸ್ ಹತ್ತು ದಿನಗಳ ಸೀಮಿತ ಅವಧಿಯಲ್ಲಿಯೇ ಮೊಟ್ಟಮೊದಲ ಬಾರಿಗೆ ಪತ್ತೆಯಾಗಿತ್ತು. ಭಾರತ ಹಾಗೂ ಯುಕೆಗಳಲ್ಲಿ ವೈರಸ್ ಪತ್ತೆಯಾದ ಒಂದು ದಿನದ ನಂತರ ಇಟಲಿಯಲ್ಲಿ ಪ್ರಥಮ ಪ್ರಕರಣ ವರದಿಯಾಗಿತ್ತು. ಆದಾಗ್ಯೂ ಹೊರದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಅತ್ಯಂತ ಕಡಿಮೆ ಇದೆ.
ಮೊದಲ ಪ್ರಕರಣ ಪತ್ತೆಯಾದ 12 ವಾರಗಳ ನಂತರ ಇಟಲಿಯಲ್ಲಿ ಭಾರತಕ್ಕಿಂತಲೂ 9 ಪಟ್ಟು ಹೆಚ್ಚು ಜನ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೆಯೇ ಯುಕೆಯಲ್ಲಿ ಭಾರತಕ್ಕಿಂತ 6.5 ಪಟ್ಟು ಹೆಚ್ಚು ಜನ ಮೃತರಾಗಿದ್ದಾರೆ.
ಅಮೆರಿಕ, ಯುಕೆ, ಚೀನಾ, ಜರ್ಮನಿ, ಫ್ರಾನ್ಸ್, ಭಾರತ ಮತ್ತು ಇಟಲಿಗಳ ಒಟ್ಟಾರೆ ಸಂಚಿತ ಪ್ರಕರಣಗಳ ಸಂಖ್ಯೆಯನ್ನು ನೋಡಿದಲ್ಲಿ, ಭಾರತ ಸಾಕಷ್ಟು ಕೆಳಮಟ್ಟದಲ್ಲಿದೆ. ಇತರ ದೇಶಗಳಲ್ಲಿ ಸೋಂಕಿತರ ಪ್ರಮಾಣ ಅತಿ ವೇಗದಲ್ಲಿ ದುಪ್ಪಟ್ಟಾಗುತ್ತಿದ್ದರೂ ಭಾರತದಲ್ಲಿ ಮಾತ್ರ ಅತ್ಯಂತ ನಿಧಾನಗತಿಯಲ್ಲಿ ಈ ಸಂಖ್ಯೆ ಬೆಳೆಯುತ್ತಿದೆ.