ಕೊಚ್ಚಿ (ಕೇರಳ): ಕೋವಿಡ್-19 (ಕೊರೊನಾ) ವೈರಸ್ನಿಂದ ಭಾರತವೂ ತೀವ್ರ ತೊಂದರೆ ಅನುಭವಿಸುತ್ತಿದೆ. ಕೇರಳ ಹಾಗು ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರ್ತಿವೆ. ಕೇರಳದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಒಂದೇ ದಿನ ಕೇರಳದಲ್ಲಿ 6 ಸೋಂಕಿತ ಪ್ರಕರಣ ಕಂಡು ಬಂದಿರುವ ಕಾರಣ ಒಟ್ಟು ಶಂಕಿತರ ಸಂಖ್ಯೆ 12ಕ್ಕೇರಿದೆ. ಈ ಬೆನ್ನಲ್ಲೇ ಅಲ್ಲಿನ ಶಾಲೆಗಳ ಪರೀಕ್ಷೆಗಳನ್ನು ಸರ್ಕಾರ ಮುಂದೂಡಿದೆ. ಇದೀಗ ಮಲಯಾಳಂ ಸಿನಿಮಾ ಒಕ್ಕೂಟ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 31ರವರೆಗೆ ಸಿನಿಮಾ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಿವೆ.
ಸೋಂಕು ಹರಡುವುದನ್ನು ತಡೆಗಟ್ಟಲು ಕೇರಳ ಸರ್ಕಾರ 7ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಶಾಲೆಗೆ ರಜೆ ಘೋಷಿಸಿದೆ. ಜತೆಗೆ ಟ್ಯೂಷನ್ ಗಳಿಗೂ ರಜೆ ಕೊಡಲಾಗಿದೆ. ಇನ್ನು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡದಂತೆ ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಸೂಚನೆ ನೀಡಿದೆ.
ಭಾರತದಲ್ಲಿ ಈಗಾಗಲೇ 53ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಮ್ಮ ರಾಜ್ಯದಲ್ಲಿ ನಾಲ್ವರಲ್ಲಿ ಈ ಸೋಂಕು ಕಂಡು ಬಂದಿದ್ದು, ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.