ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೀಘ್ರದಲ್ಲೇ ಕೇವಲ 450 ರೂ. ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿನ ಕೋವಿಡ್ -19 ಪರಿಸ್ಥಿತಿ ಕುರಿತು ಚರ್ಚೆ ಮಾಡಲು ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜಧಾನಿಯಲ್ಲಿ ಶೀಘ್ರದಲ್ಲೇ 450 ರೂ.ಗಳ ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಪರೀಕ್ಷೆ ಕೇವಲ 15 ನಿಮಿಷದ್ದಾಗಿರುತ್ತದೆ ಎಂದಿದ್ದಾರೆ.
ಕೊರೊನಾ ಹೆಚ್ಚಾಗಿ ಹಬ್ಬುತ್ತಿರುವುದರ ನಡುವೆ ನಗರದಲ್ಲಿ ಹೆಚ್ಚು ಹೆಚ್ಚು ಟೆಸ್ಟ್ಗಳನ್ನು ಮಾಡುವ ಪ್ರಯತ್ನ ನಡೆದಿದೆ. ಜೂ. 20 ರೊಳಗೆ 18,000 ಪರೀಕ್ಷೆಗಳನ್ನು ಮಾಡಿ ಮುಗಿಸುವ ಗುರಿಯನ್ನು ಹೊಂದಿರುವುದಾಗಿ ಸಂಜಯ್ ಸಿಂಗ್ ತಿಳಿಸಿದರು.
ತಮಿಳುನಾಡಿನ ನಂತರ, ಅತಿ ಹೆಚ್ಚು COVID-19 ಪರೀಕ್ಷೆಗಳನ್ನು ನಡೆಸುವ ಏಕೈಕ ರಾಜ್ಯ ದೆಹಲಿಯಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡುವುದರಲ್ಲಿ ದೆಹಲಿ ಮುಂದಿದೆ. ಆಸ್ಪತ್ರೆಯ ಹಾಸಿಗೆಗಳಲ್ಲಿ ಶೇ. 46 ರಷ್ಟು ಖಾಲಿ ಇದೆ ಎಂದು ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.