ಜೈಪುರ: ಎರಡು ದಿನಗಳ ಹಿಂದೆ ನಿಧನರಾದ ರಾಜಸ್ಥಾನದ ಬಿಜೆಪಿ ಮಾಜಿ ಮುಖ್ಯಸ್ಥ ಭನ್ವರ್ ಲಾಲ್ ಶರ್ಮಾ ಅವರ ಪಿಎಯನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಬಿಜೆಪಿ ಉನ್ನತ ನಾಯಕತ್ವದ ತಂಡ ಭೇಟಿ ನೀಡಿ ಆರೋಗ್ಯದ ಕುರಿತು ವಿಚಾರಣೆ ನಡೆಸಿತು.
ರಾಜಸ್ಥಾನದ ಬಿಜೆಪಿ ಮಾಜಿ ಮುಖ್ಯಸ್ಥ ಭನ್ವರ್ ಲಾಲ್ ಶರ್ಮಾ ಅವರು ಕೊರೊನಾ ವೈರಸ್ನಿಂದಾಗಿ ಸಾವನ್ನಪ್ಪಿದರು. ಶರ್ಮಾ ಅವರ ಸಾವಿನ ಸಮಯದಲ್ಲಿ ಮತ್ತು ಅಂತಿಮ ವಿಧಿ ವಿಧಾನದ ವೇಳೆ ಅವರ ಪಿಎ ಹಾಜರಿದ್ದರು. ಹೀಗಾಗಿ ಎರಡು ದಿನಗಳ ಹಿಂದೆಯೇ ಅವರ ರಕ್ತ, ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಸಂಗ್ರಹಿಸಲಾಗಿತ್ತು. ಭಾನುವಾರ ಪಾಸಿಟಿವ್ ವರದಿ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಬಿಜೆಪಿ ಮೂಲದ ಪ್ರಕಾರ, ಶವಸಂಸ್ಕಾರದ ಸ್ಥಳದಲ್ಲಿ ಸುಮಾರು 1,000 ಜನರಿದ್ದರು ಮತ್ತು ಸಾಮಾಜಿಕ ಅಂತರವನ್ನು ಅನುಸರಿಸಲಿಲ್ಲ ಎಂದು ತಿಳಿದುಬಂದಿದೆ. ಶರ್ಮಾ ಅವರ ಅಂತಿಮ ವಿಧಿ ವಿಧಾನಗಳಲ್ಲಿ ಹಲವಾರು ಉನ್ನತ ಬಿಜೆಪಿ ನಾಯಕರು ಸಹ ಭಾಗಿಯಾಗಿದ್ದರು. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಸಂಗನೇರ್ ಶಾಸಕ ಅಶೋಕ್ ಲಾಹೋತಿ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅರುಣ್ ಚತುರ್ವೇದಿ, ಬಿಜೆಪಿ ನಾಯಕರಾದ ಮೋಹನ್ ಲಾಲ್ ಗುಪ್ತಾ ಇತರರು ಭಾಗಿಯಾಗಿದ್ದರು ಎನ್ನಲಾಗಿದೆ.