ವಿಡಿಯೋ ಸ್ಟ್ರೀಮಿಂಗ್ ಆ್ಯಪ್ ನೆಟ್ಫ್ಲಿಕ್ಸ್ನಲ್ಲಿ ಮಕ್ಕಳು ವೀಕ್ಷಿಸಬಹುದಾದ ವಿಡಿಯೋ ಕಂಟೆಂಟ್ ನಿಯಂತ್ರಿಸಲು ಕಂಪನಿ ಹೊಸ ಕ್ರಮಗಳನ್ನು ಅಳವಡಿಸಿದೆ. ನೆಟ್ಫ್ಲಿಕ್ಸ್ನಲ್ಲಿ ಚಿಕ್ಕ ಮಕ್ಕಳು ಯಾವ ವಿಡಿಯೋಗಳನ್ನು ನೋಡಬಹುದೆಂಬುದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪಾಲಕರು ನಿಯಂತ್ರಿಸಲು ಇದರಿಂದ ಸಾಧ್ಯವಾಗಲಿದೆ.
ಇನ್ನು ಮುಂದೆ ಪಾಲಕರು ತಮ್ಮ ವೈಯಕ್ತಿಕ ಪ್ರೊಫೈಲ್ಗೆ ಪಿನ್ ಅಳವಡಿಸುವ ಮೂಲಕ ಮಕ್ಕಳು ಅದನ್ನು ಬಳಸದಂತೆ ತಡೆಯಬಹುದು ಹಾಗೂ ಮಕ್ಕಳು ನೋಡಲು ಯೋಗ್ಯವಲ್ಲದ ಟೈಟಲ್ಗಳನ್ನು ಫಿಲ್ಟರ್ ಮಾಡಿ ಹೆಚ್ಚಿನ ನಿಯಂತ್ರಣ ಹೊಂದಬಹುದು. ಫಿಲ್ಟರ್ ಮೂಲಕ ನಿರ್ದಿಷ್ಟ ಸಿರೀಸ್ ಅಥವಾ ಸಿನಿಮಾದ ಟೈಟಲ್ಗಳನ್ನು ಬ್ಲಾಕ್ ಮಾಡಿದರೆ ನಂತರ ಈ ಟೈಟಲ್ಗಳು ನಿರ್ದಿಷ್ಟ ಪ್ರೊಫೈಲ್ನಲ್ಲಿ ಕಾಣಿಸುವುದೇ ಇಲ್ಲ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ.
ಮಕ್ಕಳಿಗಾಗಿ ರಚಿಸಲಾದ ಪ್ರೊಫೈಲ್ ಮೂಲಕ ಅವರು ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದರ ಮೇಲೆ ಕಣ್ಣಿಡಬಹುದು ಹಾಗೂ ಎಪಿಸೋಡ್ಗಳ ಆಟೋ ಪ್ಲೇ ಸ್ಥಗಿತಗೊಳಿಸುವ ನಿಯಂತ್ರಕಗಳನ್ನು ಸಹ ನೆಟ್ಫ್ಲಿಕ್ಸ್ ಅಳವಡಿಸಿದೆ. ಅಕೌಂಟ್ ಸೆಟ್ಟಿಂಗ್ಸ್ನ 'Profile and Parental Controls' ಹಬ್ನಲ್ಲಿ ಪ್ರ್ರೊಫೈಲ್ ಬದಲಾವಣೆಗಳನ್ನು ಸುಲಭವಾಗಿ ಮಾಡಬಹುದಾಗಿದೆ.