ನವದೆಹಲಿ: ಕೊರೊನಾ ವೈರಸ್ ಭೀತಿಯಿಂದಾಗಿ ಹಾಸ್ಟೆಲ್‌ಗಳನ್ನು ಖಾಲಿ ಮಾಡುವಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ಮಾತ್ರ ಮೆಸ್ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಹೇಳಲಾಗಿದೆ. ಎಲ್ಲಾ ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಚಟುವಟಿಕೆಗಳನ್ನು ಪ್ರತ್ಯೇಕಿಸಲು ಮತ್ತು ಅಗತ್ಯವಲ್ಲದ ಸೇವೆಗಳನ್ನು ಸ್ಥಗಿತಗೊಳಿಸುವಂತೆ ದೆಹಲಿ ಸಿಎಂ ತಿಳಿಸಿದ ನಂತರ ಈ ನಿರ್ದೇಶನ ಬಂದಿದೆ.
ಹಾಸ್ಟೆಲ್, ತರಗತಿ ಮತ್ತು ಆಡಳಿತದಲ್ಲಿನ ಸೇವೆಗಳು ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ಚಟುವಟಿಕೆಗಳನ್ನು ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಲಾಗಿದೆ. ಅದರಂತೆ, ಎಲ್ಲಾ ವಿದ್ಯಾರ್ಥಿಗಳು ಹಾಸ್ಟೆಲ್‌ಗಳನ್ನು ಖಾಲಿ ಮಾಡಬೇಕಾಗಿದೆ ಎಂದು ತಿಳಿಸಲಾಗಿದೆ.
ಮೌಲ್ಯಮಾಪನ, ಪರೀಕ್ಷೆ ಸೇರಿದಂತೆ ಇತರ ಚಟುವಟಿಕೆಗಳನ್ನು ಮಾರ್ಚ್ 31 ರವರೆಗೆ ಮುಂದೂಡಲಾಗಿದೆ. ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧ ಸಲ್ಲಿಕೆ ಗಡುವನ್ನು ಸೂಕ್ತವಾಗಿ ವಿಸ್ತರಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ವಸತಿ ನಿಲಯ ತೊರೆದು ಮನೆಗೆ ತೆರಳಲು ಅನುಕೂಲವಾಗುವಂತೆ, ಮುಂದಿನ 48 ಗಂಟೆಗಳ ಕಾಲ ಮೆಸ್ ಸೌಲಭ್ಯಗಳು ಲಭ್ಯವಿರುತ್ತವೆ. ಮಾರ್ಚ್ 22 ರಿಂದ ಮಾರ್ಚ್ 31 ರವರೆಗೆ ಯಾವುದೇ ಸೌಲಭ್ಯಗಳು ಮತ್ತು ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿದೆ.