ನವದೆಹಲಿ: ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇರುವ ಫ್ಯಾಕ್ಟ್ ಚೆಕ್ಕರ್ ಹಾಗೂ ತಪ್ಪು ಮಾಹಿತಿ ಹರಡುವವರ ವಿರುದ್ಧ ಹೋರಾಡುತ್ತಿರುವ ಆದಾಯರಹಿತ ಸಂಸ್ಥೆಗಳಿಗಾಗಿ ಒಟ್ಟು 6.5 ಮಿಲಿಯನ್ ಡಾಲರ್ ಅನ್ನು ವ್ಯಯಿಸಲು ನಿರ್ಧರಿಸಲಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ.
ಕೊರೊನಾ ಕುರಿತಂತೆ ತಪ್ಪು ಮಾಹಿತಿ ರವಾನೆಯಾಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಈ ರೀತಿಯಾಗಿ ನಿರ್ಧರಿಸಿದೆ. ತಪ್ಪು ಮಾಹಿತಿಯಿಂದ ಜನರು ಕಳವಳಕ್ಕೆ ಈಡಾಗುತ್ತಿದ್ದು ನೈಜ ಸುದ್ದಿಯನ್ನು ನೀಡಬೇಕೆಂದು ಮನವಿ ಮಾಡಿದೆ. ಇದರ ಜೊತೆಗೆ ನಿಖರವಾದ ಸುದ್ದಿಯನ್ನು ನೀಡುವ ಮೂಲಕ ವಿಜ್ಞಾನಿಗಳು, ಪತ್ರಕರ್ತರು, ಸಾರ್ವಜನಿಕ ರಂಗದಲ್ಲಿರುವವರು ಸಹಕರಿಸಬೇಕೆಂದು ಕೇಳಿಕೊಂಡಿದೆ.
ಇದಕ್ಕಾಗಿ ಕೆಲಸ ಮಾಡುವ ಫ್ಯಾಕ್ಟ್ ಚೆಕರ್ ಹಾಗೂ ಆದಾಯರಹಿತ ಸಂಸ್ಥೆಗಳಿಗೆ 6.5 ಮಿಲಿಯನ್ ಡಾಲರ್ ಒದಗಿಸುತ್ತೇವೆ. ಫ್ಯಾಕ್ಟ್ ಚೆಕರ್ಗಳು ಹಾಗೂ ಆರೋಗ್ಯ ಪ್ರಾಧಿಕಾರಗಳು ಜನರು ಹುಡುಕುತ್ತಿರುವ ವಿಚಾರಗಳ ಬಗ್ಗೆ ಸತ್ಯಾಂಶ ಇರುವ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು ಎಂದಿದೆ.
ಆದಾಯ ರಹಿತ ಸಂಸ್ಥೆಗಳು ಕೂಡಾ ಸುದ್ದಿಯನ್ನು ಪರಿಷ್ಕರಿಸಬೇಕು ಎಂದಿರುವ ಗೂಗಲ್ ತನ್ನ ಗೂಗಲ್ ನ್ಯೂಸ್ ಇನ್ಶಿಯೇಟೀವ್ ಕಾರ್ಯಕ್ರಮದ ಅನ್ವಯ ಆನ್ಲೈನ್ ಸಂಪನ್ಮೂಲ ಕೇಂದ್ರಗಳಿಗೆ ನೈಜ ಸುದ್ದಿಯನ್ನು ಒದಗಿಸಲು ಮುಂದಾಗಿದೆ. ಜೊತೆಗೆ ಗೂಗಲ್ ಟ್ರೆಂಡ್ ಡಾಟಾ ವಿಶ್ವದ ಪತ್ರಕರ್ತರಿಗೆ, ಆರೋಗ್ಯ ಸಂಸ್ಥೆಗಳಿಗೆ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನೀಡಲು ಮುಂದಾಗಿದೆ.