ನವದೆಹಲಿ: ವಿಶ್ವದಲ್ಲಿ ಕೊರೊನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 80 ಸಾವಿರಕ್ಕೆ ತಲುಪಿದೆ. ಈವರೆಗೆ ಒಟ್ಟು 82,149 ಜನರು ಸಾವನ್ನಪ್ಪಿದ್ದು, 14,46,557 ಪ್ರಕರಣಗಳು ದಾಖಲಾಗಿವೆ. ಸುಮಾರು 3,07,982 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಟಲಿ, ಸ್ಪೇನ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಕೊರೊನಾ ಉಪಟಳ ತೀವ್ರವಾಗಿದೆ. ಅಮೆರಿಕದಲ್ಲಿ 3,83,000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಂತರದ ಸ್ಥಾನದಲ್ಲಿ ಸ್ಪೇನ್ನಲ್ಲಿ 1,46,690, ಇಟಲಿಯಲ್ಲಿ 1,35,586 ಮತ್ತು ಫ್ರಾನ್ಸ್ನಲ್ಲಿ 1,10, 070 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ಸಂಬಂಧಿ ಸಾವುಗಳ ವಿಚಾರಕ್ಕೆ ಬರುವುದಾದರೆ ಇಟಲಿಯಲ್ಲಿ 17,127, ಸ್ಪೇನ್ನಲ್ಲಿ 13,897, ಫ್ರಾನ್ಸ್ನಲ್ಲಿ 10,343 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸ್ಪೇನ್ನಲ್ಲಿ ಒಂದೇ ದಿನದಲ್ಲಿ 757 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯ ನಂತರ ಅತಿ ದೊಡ್ಡ ಕೊರೊನಾ ಪೀಡಿತ ರಾಷ್ಟ್ರ ಇದಾಗಿದ್ದು, 48,021 ಮಂದಿ ಈವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆ ಕೊರೊನಾವನ್ನು ಮಹಾಮಾರಿ ಎಂದು ಘೋಷಣೆ ಮಾಡಿದಾಗಿನಿಂದ ಬಹುತೇಕ ರಾಷ್ಟ್ರಗಳನ್ನು ತಮ್ಮ ತಮ್ಮ ರಾಷ್ಟ್ರಗಳ ಗಡಿಗಳನ್ನು ಬಂದ್ ಮಾಡಿವೆ. ವಿಮಾನಯಾವನ್ನೂ ಕೂಡಾ ರದ್ದು ಮಾಡಿ ಲಾಕ್ಡೌನ್ ಘೋಷಣೆ ಮಾಡಿವೆ. ಆದರೂ ಕೂಡಾ ಕೊರೊನಾ ವೇಗವಾಗಿ ಹರಡುತ್ತಿರುವುದು ಆತಂಕಕ್ಕೀಡು ಮಾಡಿದೆ.