ಹೈದರಾಬಾದ್: ಕೊರೊನಾ ವೈರಸ್ ಕಾರಣದಿಂದಾಗಿ ಕಳೆದ 12 ವಾರಗಳಲ್ಲಿ ವಿಶ್ವಾದ್ಯಂತ 28.4 ಮಿಲಿಯನ್ ಶಸ್ತ್ರಚಿಕಿತ್ಸೆಗಳು (ಆಪರೇಷನ್) ರದ್ದಾಗಿ ಮುಂದೂಡಲ್ಪಟ್ಟಿವೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ತತ್ಪರಿಣಾಮ ಆಸ್ಪತ್ರೆಯ ಇತರ ಸೇವೆಗಳಿಗೆ ಅಡ್ಡಿಪಡಿಸಿದಂತಾಗಿದೆ. ಪ್ರತಿ ಹೆಚ್ಚುವರಿ ವಾರವೂ 2.4 ಮಿಲಿಯನ್ ಶಸ್ತ್ರಚಿಕಿತ್ಸೆಗಳನ್ನು ರದ್ದುಪಡಿಸಲಾಗಿದೆ ಎಂದು ವರದಿ ಹೇಳಿದೆ.
ಜಗತ್ತಿನಲ್ಲಿ ಶೇ 72.3ರಷ್ಟು ಯೋಜಿತ ಶಸ್ತ್ರಚಿಕಿತ್ಸೆಗಳನ್ನು ರದ್ದು ಮಾಡಲಾಗಿದೆ. 12 ವಾರಗಳ ಅವಧಿಯಲ್ಲಿ 6.3 ಮಿಲಿಯನ್ ಮೂಳೆ ಶಸ್ತ್ರಚಿಕಿತ್ಸೆಗಳು ರದ್ದಾಗಿವೆ. 2.3 ಮಿಲಿಯನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ರದ್ದುಗೊಳಿಸಿ ಮುಂದೂಡಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೋವಿಡ್-19 ಅನ್ನು ತಡೆಗಟ್ಟುವ ಸಲುವಾಗಿ ಈ ಮೊದಲೇ ಯೋಜಿಸಲಾಗಿದ್ದ ಶಸ್ತ್ರಚಿಕಿತ್ಸೆ ರದ್ದುಗೊಳಿಸಿ ಮುಂದಕ್ಕೆ ಹಾಕಲಾಗಿದೆ. ಕೊರೊನಾ ನಿಯಂತ್ರಿಸಲು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ವಿಭಾಗವನ್ನು ತುರ್ತು ನಿಗಾ ಘಟಕಗಳಾಗಿ ಪರಿವರ್ತಿಸಲಾಗಿದೆ ಎಂದು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕ ಅನೀಲ್ ಭಾಂಗು (Aneel Bhangu) ಹೇಳಿದರು. ಇವರು ಎನ್ಐಹೆಚ್ಆರ್ ಜಾಗತಿಕ ಆರೋಗ್ಯ ಸಂಶೋಧನಾ ಘಟಕದ ಸಲಹೆಗಾರ ಶಸ್ತ್ರಚಿಕಿತ್ಸಕರೂ ಆಗಿದ್ದಾರೆ.