ಪಾಟ್ನಾ(ಬಿಹಾರ): ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಬಿಹಾರದ ಬೆಟಿಯಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲಾಗಿದೆ.
ಬಿಹಾರದ ವಕೀಲ ಮುರಾದ್ ಅಲಿ ಈ ದೂರನ್ನು ದಾಖಲಿಸಿದ್ದು, ಕೊರೊನಾ ವೈರಸ್ ಹರಡಲು ಈ ಇಬ್ಬರು ಸಂಚು ರೂಪಿಸಿದ್ದಾರೆ. ಕೊರೊನಾದಿಂದ ವಿಶ್ವದಲ್ಲಿನ ಲಕ್ಷಾಂತರ ಜನರು ಮೃತಪಡಲು ಇವರಿಬ್ಬರು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಕೀಲ ಮುರಾದ್ ಅಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಾಕ್ಷಿಯಾಗಿ ಹೆಸರಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 269, 270, 271, 302, 307,500, 504, ಮತ್ತು 120 ಬಿ ಅಡಿಯಲ್ಲಿ ಮುರಾದ್ ಅಲಿ ದೂರು ದಾಖಲಿಸಿದ್ದಾರೆ. ಈ ಕೇಸ್ ಜೂನ್ 16 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.
ಇದಕ್ಕೂ ಮುನ್ನ ಇದೇ ರೀತಿಯ ವಿಷಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಚೀನಾದ ರಾಯಭಾರಿ ಸನ್ ವೀಡಾಂಗ್ ವಿರುದ್ಧ ಮುಜಾಫರಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.