ಬೆಂಗಳೂರು: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆ 'ಕೊವಾಕ್ಸಿನ್' ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವು ಇಂದಿನಿಂದ ಬೆಂಗಳೂರಿನ ವೈದೇಹಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸಲು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನಮ್ಮ ಆಸ್ಪತ್ರೆಗೆ ಅನುಮತಿ ನೀಡಿದೆ ಎಂದು ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ ಅಧಿಕಾರಿ ಕೆ. ರವಿ ಬಾಬು ಹೇಳಿದ್ದಾರೆ.
"ಸುಮಾರು ಒಂದು ಸಾವಿರ ಸ್ವಯಂಸೇವಕರು ಲಸಿಕೆ ಪ್ರಯೋಗದಲ್ಲಿ ಭಾಗವಹಿಲಿದ್ದಾರೆ. ಸ್ವಯಂಸೇವಕರಿಗೆ ಎರಡು ಸಮಯದಲ್ಲಿ ಲಸಿಕೆಯನ್ನು ನೀಡಲಾಗುವುದು, ಇಂದು ಮೊದಲನೇ ಡೋಸ್ ನೀಡಿದ್ರೆ, ಎರಡನೇ ಡೋಸ್ ಅನ್ನು ಡಿಸೆಂಬರ್ 30 ರಂದು ನೀಡಲಾಗುವುದು" ಎಂದು ಬಾಬು ಹೇಳಿದರು.
ಸ್ವಯಂಸೇವಕರು ಆಸ್ಪತ್ರೆಯಲ್ಲಿ ಇರಬೇಕಾಗಿಲ್ಲವಾದರೂ, ಪ್ರತಿಕ್ರಿಯೆ ಮತ್ತು ಮಾಹಿತಿಗಾಗಿ ಫೋನ್ ಅಥವಾ ವಿಡಿಯೋ ಕರೆ ಮೂಲಕ ಪ್ರತಿದಿನ ಅವರನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
"18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರನ್ನು ಸ್ವಯಂಸೇವಕರನ್ನಾಗಿ ಆಯ್ಕೆ ಮಾಡಲಾಗಿದೆ. ಲಸಿಕೆಯು, ಸೋಂಕನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಕಾರಣಕ್ಕಾಗಿ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕು ಇಲ್ಲದ ಮತ್ತು ರೋಗಲಕ್ಷಣವಿಲ್ಲದವರಿಗೆ ಮಾತ್ರ ಇದನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.
"ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಯೋಗವನ್ನು ಪ್ರಾರಂಭಿಸಿ ಬಯೋಟೆಕ್‌ನ ವಿಜ್ಞಾನಿಗಳು ಮತ್ತು ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಚರ್ಚೆ ನಡೆಸಲಿದ್ದಾರೆ. ಪ್ರಯೋಗಗಳ ಡೇಟಾವನ್ನು ಪ್ರಾಯೋಜಕ ತಂಡವು ವಿಶ್ಲೇಷಣೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಮೌಲ್ಯಮಾಪನಕ್ಕಾಗಿ ಸಲ್ಲಿಸಲಾಗುವುದು" ಎಂದು ಬಾಬು ಹೇಳಿದ್ದಾರೆ.