ಗುಜರಾತ್: 2002ರ ಗೋಧ್ರಾ ಸಬರಮತಿ ರೈಲು ಅಗ್ನಿ ದುರಂತದ ಪ್ರಮುಖ ಆರೋಪಿ ಹಾಗೂ ಅಪರಾಧಿ ಯಾಕೂಬ್ ಪಟಾಲಿಯಾಗೆ ಗುಜರಾತ್ ಹೈಕೋರ್ಟ್ 10 ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ನನ್ನ 54 ವರ್ಷದ ಪತ್ನಿ ಹಾಗೂ 24 ವರ್ಷದ ನಿರುದ್ಯೋಗಿ ಪುತ್ರನನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ನನಗೆ 30 ದಿನಗಳ ಕಾಲ ಜಾಮೀನು ನೀಡಿ ಎಂದು ಯಾಕೂಬ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್ ಕೇವಲ 10 ದಿನಗಳ ಕಾಲ ಅವಕಾಶ ಕಲ್ಪಿಸಿ ಬೇಲ್ ನೀಡಿದೆ.
ಯಾಕೂಬ್ನ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕವೇ ಜಾಮೀನು ನೀಡಲಾಗಿದೆ ಎಂದು ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ. ಜಾಮೀನು ಅವಧಿ ಮುಗಿಯುವ ಮುನ್ನವೇ ಜೈಲು ಅಧಿಕಾರಿಗಳ ಬಳಿ ಬಂದು ಸರಂಡರ್ ಆಗಬೇಕು ಎಂದು ಸೂಚಿಸಿದೆ.
2002ರ ಫೆಬ್ರವರಿ 27 ರಂದು ಅಯೋಧ್ಯೆಯಿಂದ ಗುಜರಾತ್ಗೆ ಹಿಂದಿರುಗುತ್ತಿದ್ದ ಗೋಧ್ರಾ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 59 ಹಿಂದೂ ಯಾತ್ರಿಗಳು ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಯಾಕೂಬ್ ಪಟಾಲಿಯಾಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.