ಹಾಪುರ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೋಕ್ಸೋ ಕೋರ್ಟ್ ವ್ಯಕ್ತಿಯೋರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಶೇಷ ನ್ಯಾಯಾಧೀಶೆ ವೀಣಾ ನಾರಾಯಣ್, ಅಪರಾಧಿ ದಲ್ಪತ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಜೊತೆಗೆ ಐಪಿಸಿ ಸೆಕ್ಷನ್ 6ರ ಪ್ರಕಾರ ಅಪರಾಧಿಯು ಜೀವ ಇರುವ ತನಕ ಕಾರಾಗೃಹದಲ್ಲಿಯೇ ಇರಬೇಕೆಂದು ತೀರ್ಪು ನೀಡಿದ್ದಾರೆ.
ಆಗಸ್ಟ್ 6 ರಂದು ಅಮ್ರೋಹಾ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಆಗಸ್ಟ್ 7ರ ಬೆಳಗ್ಗೆ ಮೂರ್ಛೆ ಹೋದ ಸ್ಥಿತಿಯಲ್ಲಿ ರಕ್ತಸಿಕ್ತವಾಗಿ ಬಾಲಕಿ ಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆಗಸ್ಟ್ 14ರಂದು ತೀವ್ರ ತನಿಖೆಯ ನಂತರ ಬಂಧಿಸಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹರೇಂದ್ರ ತ್ಯಾಗಿ ಶಿಕ್ಷೆಯ ಬಗ್ಗೆ ವಿವರಣೆ ನೀಡಿದ್ದು, ತೀರ್ಪು ಕೇವಲ 22 ದಿನಗಳಲ್ಲಿ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಸಂತ್ರಸ್ತೆ ಮೀರತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕಳೆದ ನಾಲ್ಕು ದಿನಗಳ ಅಂತರದಲ್ಲಿ ಪೋಕ್ಸೋ ಕೋರ್ಟ್ನಲ್ಲಿ ಎರಡನೇ ಅತ್ಯಾಚಾರ ಪ್ರಕರಣದ ತೀರ್ಪು ಹೊರಬಂದಿದ್ದು, ಅಕ್ಟೋಬರ್ 15ರಂದು ಇಬ್ಬರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಲಾಗಿತ್ತು.
ಈ ಇಬ್ಬರೂ ಅಪರಾಧಿಗಳು 2018ರಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. ಈ ಪ್ರಕರಣದ ತೀರ್ಪು ಅಕ್ಟೋಬರ್ 15ರಂದು ಬಂದಿತ್ತು.