ಭೋಪಾಲ್ (ಮಧ್ಯ ಪ್ರದೇಶ): ಗುನಾದಲ್ಲಿ ದಂಪತಿಗಳನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುನಾ ಎಸ್‌ಪಿ ಮತ್ತು ಗ್ವಾಲಿಯರ್ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಅವರ ವರ್ಗಾವಣೆ ಬಳಿಕ ಇದೀಗ ಮಧ್ಯಪ್ರದೇಶ ಸರ್ಕಾರ ಆರು ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿದೆ.
ಗುನಾ ಎಸ್‌ಪಿ ತರುಣ್ ನಾಯಕ್ ಇಬ್ಬರು ಮಹಿಳಾ ಪೊಲೀಸರು ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಶೋಕ್ ಸಿಂಗ್ ಕುಶ್ವಾಹ, ರಾಜೇಂದ್ರ ಶರ್ಮಾ, ಪವನ್ ಯಾದವ್, ನರೇಂದ್ರ ರಾವತ್, ನೀತು ಯಾದವ್ ಮತ್ತು ರಾಣಿ ರಘುವಂಶಿ ಅವರನ್ನು ಅಮಾನತುಗೊಳಿಸಲಾಗಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಿಜೆಪಿ ಸರ್ಕಾರ ಕಲೆಕ್ಟರ್ ಎಸ್ ವಿಶ್ವನಾಥನ್ ಮತ್ತು ಎಸ್‌ಪಿ ನಾಯಕಂದ್ ಐಜಿ ರಾಜಬಾಬು ಸಿಂಗ್ ಅವರನ್ನು ವರ್ಗಾಯಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುನಾ ನಗರದಲ್ಲಿ ಕಾಲೇಜಿಗೆ ಮೀಸಲಿರಿಸಿದ್ದ ಸರಕಾರಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯನ್ನು ಹೊರಹಾಕಲು ಅಧಿಕಾರಿಗಳು ಪ್ರಯತ್ನಿಸಿದಾಗ ದಂಪತಿ ಕೀಟನಾಶಕವನ್ನು ಸೇವಿಸಿದ್ದರು. ಪೊಲೀಸರು ಅವರಿಗೆ ಲಾಠಿ ಪ್ರಹಾರ ಕೂಡಾ ನಡೆಸಿದ್ರು. ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.