ನವದೆಹಲಿ: ದೇಶದಲ್ಲಿ ಸತತ ಎರಡನೇ ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಜೂನ್ (118 ಶೇಕಡಾ), ಆಗಸ್ಟ್ (127 ಶೇಕಡಾ) ಮತ್ತು ಸೆಪ್ಟೆಂಬರ್ (104 ಶೇಕಡಾ) ತಿಂಗಳಲ್ಲಿ ಅಧಿಕ ಮಳೆಯಾಗಿದ್ದು, ಜುಲೈನಲ್ಲಿ (ಶೇಕಡಾ 90)ಕಡಿಮೆ ಮಳೆಯಾಗಿದೆ. ನಾಲ್ಕು ತಿಂಗಳ ಸರಾಸರಿಯಲ್ಲಿ ಶೇಕಡಾ 109ರಷ್ಟು ಮಳೆಯಾಗಿದೆ.
"2020ರ ಜೂನ್ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಮಾನ್ಸೂನ್ ಮಳೆ 95.4 ಸೆಂಟಿ ಮೀಟರ್ ಆಗಿದ್ದು, 1961-2010ರ ದತ್ತಾಂಶದ ಸರಾಸರಿ 87.7 ಸೆಂಟಿ ಮೀಟರ್ಗೆ ಹೋಲಿಸಿದರೆ ಅಧಿಕವಾಗಿದೆ" ಎಂದು ಐಎಂಡಿಯ ವಿಜ್ಞಾನಿ ಆರ್.ಕೆ.ಜೆನಮಣಿ ತಿಳಿಸಿದ್ದಾರೆ.
ಈ ವರ್ಷ ಹತ್ತೊಂಭತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಒಂಭತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಬಿಹಾರ, ಗುಜರಾತ್, ಮೇಘಾಲಯ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಿದೆ. ಸಿಕ್ಕಿಂನಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ.
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಡಿಮೆ ಮಳೆಯಾಗಿದೆ. ಲಡಾಖ್ ಹಾಗೂ ದೆಹಲಿಯಲ್ಲೂ ಅತಿ ಕಡಿಮೆ ಮಳೆಯಾಗಿದೆ.