ನವದೆಹಲಿ : ಕೊರೊನಾ ವೈರಸ್‌ಗೆ ಮುಂದಿನ ವರ್ಷ ಭಾರತದಲ್ಲಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಪ್ರೊಫೆಸರ್ ಗಗನ್‌ದೀಪ್ ಕಾಂಗ್ ತಿಳಿಸಿದ್ದಾರೆ. ಆದರೆ, 130 ಕೋಟಿ ಮಂದಿ ಭಾರತೀಯರಿಗೆ ಲಸಿಕೆಯ ಲಭ್ಯತೆ ಅತಿದೊಡ್ಡ ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಕ್ಸಿನ್ ಭದ್ರತೆ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಗ್ಲೋಬಲ್ ಅಡ್ವೈಸರಿ ಕಮಿಟಿಯ ಸದಸ್ಯರೂ ಆಗಿರುವ ವೆಲ್ಲೂರಿಗೆ ಸೇರಿದ ಕ್ರಿಸ್ಟಿಯನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಗಗನ್‌ದೀಪ್ ಮಾಧ್ಯಮ ಸಂಸ್ಥೆಯೊಂದಕ್ಕೆ ಈ ವಿಷಯ ತಿಳಿಸಿದ್ದಾರೆ.
ವಿಶ್ವಾದ್ಯಂತ ಪ್ರಯೋಗದಲ್ಲಿರುವ ವ್ಯಾಕ್ಸಿನ್‌ಗಳು ಸಾಮರ್ಥ್ಯ ಅಥವಾ ಅಭಿವೃದ್ಧಿ ಈ ವರ್ಷಾಂತ್ಯಕ್ಕೆ ತಿಳಿಯಲಿದೆ. ಉತ್ತಮ ಫಲಿತಾಂಶ ಬಂದರೆ 2021ರ ಆರಂಭದಲ್ಲಿ ಅಲ್ಪ ಸಂಖ್ಯೆಯ ವ್ಯಾಕ್ಸಿನ್‌ನ ಡೋಸ್‌ಗಳು ಲಭ್ಯವಾಗಲಿವೆ. ದೊಡ್ಡ ಸಂಖ್ಯೆಯಲ್ಲಿ ಬೇಕಾದರೆ ಕಾಯಬೇಕಾಗುತ್ತದೆ. ಪ್ರಸ್ತುತ ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿರುವ ವ್ಯಾಕ್ಸಿನ್‌ಗಳು ಯಶಸ್ವಿಯಾಗುವ ಸಾಧ್ಯತೆ ಶೇ.50ರಷ್ಟಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಪ್ರಯೋಗ ಮುಗಿಸಿ ಲಸಿಕೆ ಬಳಕೆಗೆ ಬಂದ ನಂತರ ಭಾರತ ದೇಶದಲ್ಲಿ ಅದರ ಸಂಗ್ರಹಣೆ ಮತ್ತು ವಿತರಣೆ ಕಷ್ಟವಾಗಲಿದೆ. ಕೋವಿಡ್‌ನಿಂದ ಹೆಚ್ಚು ಅಪಾಯಕ್ಕೆ ಸಿಲುಕುವ ವೃದ್ಧರಿಗೆ ವ್ಯಾಕ್ಸಿನ್ ಕಲ್ಪಿಸಲು ಸರಿಯಾದ ವ್ಯವಸ್ಥೆ ಇಲ್ಲ. ಎಲ್ಲಾ ವಯೋಮಾನದವರಿಗೆ ರೋಗ ನಿರೋಧಕ ಶಕ್ತಿ ನೀಡುವ ಒಂದು ವ್ಯವಸ್ಥೆ ನಿರ್ವಹಣೆ ಭಾರತದ ಎದುರು ಇರುವ ದೊಡ್ಡ ಸವಾಲಾಗಿದೆ. ಸರಿಯಾದ ಫಲಿತಾಂಶ ನೀಡದ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಗಳ ಮೇಲೆ ದೇಶ ಹೆಚ್ಚು ಅವಲಂಬನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.