ನವದೆಹಲಿ: ಇಲ್ಲಿನ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ತನ್ನ ಉದ್ಯೋಗಿಗಳಿಗೆ 2 ಲಕ್ಷ ರೂ.ಗಳ ವಿಮಾ ರಕ್ಷಣೆ ಪ್ರಕಟಿಸಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನ ಉದ್ಯೋಗಿ ಮೃತಪಟ್ಟರೆ ಅವರ ಕುಟುಂಬಗಳಿಗೆ ವಿಮೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದೆ.
ದೇಶವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೋರಾಡುತ್ತಿದ್ದು, ಡಿಎಸ್‌ಜಿಎಂಸಿ ವತಿಯಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಉಚಿತ ಆಹಾರ ಪದಾರ್ಥ ಒದಗಿಸಲಾಗುತ್ತಿದೆ ಹಾಗೂ ಗುರುದ್ವಾರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆಶ್ರಯ ನೀಡಲಾಗುತ್ತಿದೆ.
ರಾಷ್ಟ್ರ ರಾಜಧಾನಿಯಾದ್ಯಂತ ಆಹಾರ ಮತ್ತು ಸಾರಿಗೆ ಸಂಬಂಧಿತ ಸೇವೆಗಳನ್ನು ಒದಗಿಸುತ್ತಿರುವ ತನ್ನ 2,500 ಕಾರ್ಮಿಕರಿಗೆ ತಲಾ 2 ಲಕ್ಷ ರೂ.ಗಳ ವಿಮೆಯನ್ನು ಗುರುದ್ವಾರ ನಿರ್ವಹಣಾ ಸಮಿತಿ ಘೊಷಣೆ ಮಾಡಿದೆ.
ಡಿಎಸ್‌ಜಿಎಂಸಿ ಸಿಬ್ಬಂದಿ, ಕಾರ್ಮಿಕ ಶಿಬಿರ ಸೇರಿದಂತೆ ಆಶ್ರಯ ಮನೆಗಳು ಇತರೆಡೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರಿಗೂ ಕೊರೊನಾ ವೈರಸ್ ತಗುಲುವ ಅಪಾಯವಿದೆ ಎಂಬ ಕಾರಣಕ್ಕೆ ಈ ವಿಮೆ ಮಾಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತೊಡಗಿರುವ ಸುಮಾರು 200 ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸಿಬ್ಬಂದಿಯ ವಸತಿ ಮತ್ತು ಆಹಾರದ ಅವಶ್ಯಕತೆಗಳನ್ನು ಡಿಎಸ್‌ಜಿಎಂಸಿ ನೋಡಿಕೊಳ್ಳುತ್ತಿದೆ.