ಹೈದರಾಬಾದ್: ಕೊರೊನಾ ವೈರಾಣು ತಂದಿರುವ ಜಾಗತಿಕ ಪಿಡುಗು ಮನುಕುಲದ ಬದುಕು, ಭರವಸೆ ಮತ್ತು ಆಶೋತ್ತರಗಳನ್ನು ಇನ್ನಿಲ್ಲದಂತೆ ಬಾಧಿಸತೊಡಗಿರುವುದರ ಜೊತೆಗೆ ದೇಶಗಳ ಆರ್ಥಿಕತೆಗಳನ್ನು ಮತ್ತು ಅವುಗಳ ವಾಣಿಜ್ಯ ಕ್ಷೇತ್ರಗಳನ್ನು ಛಿದ್ರಗೊಳಿಸಿ ಒಂದು ಬಗೆಯ ಭೀಭತ್ಸವನ್ನೇ ಸೃಷ್ಟಿಸತೊಡಗಿದೆ. ಭಾರತದ ಭವಿತವ್ಯದ ಮೇಲೆ ಕೊವಿಡ್ ಭೀಕರ ಪರಿಣಾಮ ಬೀರಲಿದೆ ಎಂದು UNICEF ಎಚ್ಚರಿಕೆ ನೀಡಿದೆ. ಕೊರೊನಾ ವೈರಾಣು ಹರಡುತ್ತಿರುವ ಬೆನ್ನಲ್ಲೇ ಮಲೇರಿಯಾ ಮತ್ತು ಪೊಲಿಯೋ ಖಾಯಿಲೆಗಳ ಕುರಿತು ಸಹ ಗಮನ ಕೇಂದ್ರೀಕರಿಸಬೇಕಾಗಿದೆ ಎಂದು ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಈ ಕೊರೊನಾ ವೈರಾಣು ಮಕ್ಕಳ ಮೇಲೆ ಎಂತಹ ಕೆಟ್ಟ ಪರಿಣಾಮ ಉಂಟು ಮಾಡಬಹುದು ಎಂಬ ಬಗ್ಗೆ UNICEF ವ್ಯಕ್ತಪಡಿಸಿರುವ ಆತಂಕವು ತಿಳಿಸುತ್ತದೆ.
ಲಾಕ್ ಡೌನ್ ಮತ್ತು ಕರ್ಫ್ಯೂಗಳ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆ ಕುಸಿದು ಬಿದ್ದು ಉದ್ಯೋಗಗಳು ನಷ್ಟವಾಗಿವೆಯಲ್ಲದೇ ಸಾಮಾನ್ಯ ವೈದ್ಯಕೀಯ ಸೌಲಭ್ಯಗಳೂ ಸಿಗದಂತಾಗಿವೆ. ಇದೆಲ್ಲದರಿಂದ ಪೋಷಕರ ವರಮಾನ ತೀವ್ರವಾಗಿ ಕುಸಿದು ಇದರಿಂದ ಕುಪೋಷಣೆ ಮತ್ತು ಹಸಿವಿನಿಂದ ಮಕ್ಕಳು ಸಾವಿಗೀಡಾಗಲಿರುವ ಸ್ಥಿತಿಯತ್ತ UNICEF ಒತ್ತು ಕೊಟ್ಟು ಹೇಳಿದೆ. ಮುಂದಿನ 6 ತಿಂಗಳಲ್ಲಿ 118 ಬಡ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ದಿನಕ್ಕೆ ಏನಿಲ್ಲೆಂದರೂ 6000ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಮಕ್ಕಳು ಸಾವಿಗೀಡಾಗುವ ಮೊದಲ ಹತ್ತು ದೇಶಗಳಲ್ಲಿ ಭಾರತವೂ ಇರಲಿದೆ ಎಂಬುದು ನಮ್ಮನ್ನು ಆತಂಕಕ್ಕೀಡುಮಾಡುವ ಸಂಗತಿಯಾಗಿದೆ.
ಭಾರತವಲ್ಲದೇ ಇಥಿಯೋಪಿಯಾ, ಕಾಂಗೊ, ಟಾಂಜಾನಿಯಾ, ನೈಜೀರಿಯಾ, ಉಗಾಂಡಾ, ಪಾಕಿಸ್ತಾನಗಳಲ್ಲಿ ಅತಿಹೆಚ್ಚು ಮಕ್ಕಳು ಸಾಯಲಿವೆ. ತಮ್ಮ ಐದನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರ ಒಳಗಾಗಿ ಜಗತ್ತಿಗೆ ವಿದಾಯ ಹೇಳುತ್ತಿರುವ ಈ ನತದೃಷ್ಟ ಮಕ್ಕಳ ಸಾಲಿಗೆ ಹೊಸದಾಗಿ ಕೊವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದ ಸಾಯಲಿರುವ ಮಕ್ಕಳು ಸಹ ಸೇರಿಕೊಳ್ಳಲಿವೆ. ಸೂಕ್ತ ಮಟ್ಟದ ಪೋಷಕಾಂಶಯುಕ್ತ ಆಹಾರ ಮತ್ತು ಮೂಲಭೂತ ವೈದ್ಯಕೀಯ ಸೌಲಭ್ಯಗಳಿಲ್ಲದೇ ಉಂಟಾಗಬಹುದಾದ ಮಕ್ಕಳ ಅಕಾಲಿಕ ಮರಣವನ್ನು ತಡೆಯುವುದು ಈ ದೇಶಗಳ ಆದ್ಯ ಕರ್ತವ್ಯವಾಗಿದೆ. ಸೂಕ್ತ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಪರಿಸ್ಥಿತಿ ಹದಗೆಡುವುದು ನಿಶ್ಚಿತವೆಂದಿರುವ UNICEFನ ಎಚ್ಚರಿಕೆ ಘಂಟೆ ಭಾರತವನ್ನೂ ಸೇರಿದಂತೆ ಈ ನೂರಕ್ಕೂ ಹೆಚ್ಚು ದೇಶಗಳನ್ನು ಎಚ್ಚರಿಸಬೇಕಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ಮಕ್ಕಳ ಕ್ಷೇಮಪಾಲನೆ ಮತ್ತಷ್ಟು ಕುಸಿದಲ್ಲಿ ಅದು ಬಾಣಲೆಯಿಂದ ಬೆಂಕಿಗೆ ಎಂಬ ಸ್ಥಿತಿಯಾಗಲಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ, UNICEF ಮತ್ತು ಲ್ಯಾನ್ಸೆಟ್ ಜರ್ನಲ್ ಗಳು ಜಂಟಿ ಅಧ್ಯಯನವೊಂದನ್ನು ನಡೆಸಿ ಘೋಷಣೆ ಮಾಡಿರುವ ಸಂಗತಿಯೇನೆಂದರೆ ಮಧ್ಯ ಆಫ್ರಿಕಾ, ಚಾಡ್ ಮತ್ತು ಸೋಮಾಲಿಯಾದಂತಹ ದೇಶಗಳ ಶಿಶುಮಕ್ಕಳ ಕ್ಷೇಮಪಾಲನೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. 180 ದೇಶಗಳ ಪೈಕಿ ಭಾರತದ ಸ್ಥಾನ 131ನೆಯ ಸ್ಥಾನ ಹೊಂದಿದೆ ಎಂಬುದನ್ನೂ ಈ ಅಧ್ಯಯನ ತಿಳಿಸಿದೆ. ದೇಶದಲ್ಲಿ ಕುಪೋಷಣೆಯನ್ನು ಹತೋಟಿಯಲ್ಲಿಡಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಇಲ್ಲಿ ಪ್ರತಿ ವರ್ಷ ಏಳು ಲಕ್ಷ ಮಕ್ಕಳು ಬಲಿಯಾಗುತ್ತಿವೆ. ಕುಪೋಷಣೆಯನ್ನು ನಿರ್ಮೂಲಿಸಲು ಸರ್ಕಾರ ಕೈಗೊಂಡಿರುವ ‘ಪೋಷಣ್ ಅಭಿಯಾನ್” ಯೋಜನೆ ಮತ್ತು ಕಳೆದ ನಾಲ್ಕು ದಶಕಗಳಿಂದಲೂ ಚಾಲ್ತಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಸೇವಾ (ICDS) ಯೋಜನೆಗಳನ್ನು ಪರಾಮರ್ಶೆ ನಡೆಸಲು ಇದು ಸುಸಮಯವಾಗಿದೆ. ಈ ವ್ಯವಸ್ಥೆಯಲ್ಲಿ ಎಲ್ಲೆಲ್ಲಿ ವಿಫಲತೆಗಳಿವೆ ಎಂದು ಕಂಡುಹಿಡಿಯುವ ಅಗತ್ಯತೆ ಈಗ ಉಂಟಾಗಿದೆ.
177 ದೇಶಗಳ ಸುಮಾರು 130 ಕೋಟಿ ಮಕ್ಕಳು ಇಂದು ತಮ್ಮ ಶಾಲೆಗಳಿಗೆ ಹೋಗಲಾಗುತ್ತಿಲ್ಲ. ಮದ್ಯಾಹ್ನದ ಬಿಸಿಯೂಟದಿಂದ ವಂಚಿತರಾಗಿರುವ ಮಕ್ಕಳ ಸಂಖ್ಯೆಯೂ ಕೋಟಿಗಳ ಸಂಖ್ಯೆಯಲ್ಲಿದೆ! 37 ದೇಶಗಳಲ್ಲಿ 12 ಕೋಟಿ ಮಕ್ಕಳಿಗೆ ಸಿಡುಬು ನಿರೋಧಕ ಲಸಿಕೆಯೂ ಲಭ್ಯವಾಗಿಲ್ಲ ಎಂಬುದನ್ನು ನೋಡಿದಾಗ ಈಗಿನ ಕೊರೊನಾ ಪಿಡುಗಿನ ಸಮಯದಲ್ಲಿ ಈ ಮಕ್ಕಳು ಎಂತಹ ಸಮಸ್ಯೆಗೆ ಒಡ್ಡಲ್ಪಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ದೇಶದ 40% ಮಕ್ಕಳಿಗೆ ಲಸಿಕೆಗಳಾಗಲೀ, ವಿಟಮಿನ್ ಗಳಾಗಲೀ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿಶು ಮರಣದವನ್ನು ತಡೆಯಲು ಸರ್ಕಾರಗಳು ಏನು ಮಾಡುತ್ತವೆ ಎಂಬುದು ಆ ದೇಶಗಳ ಭವಿಷ್ಯವನ್ನು ನಿರ್ಧರಿಸಿಲಿದೆ. ಸುಸ್ಥಿರ ಮಾನವ ಅಭಿವೃದ್ಧಿ ಗುರಿಗಳಲ್ಲಿ ಶಿಶುಮಕ್ಕಳ ಕಲ್ಯಾಣ ಬಹಳ ಮುಖ್ಯ ಅಂಶವಾಗಿದೆ. ದೇಶಗಳು ತಮ್ಮ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವ ಜೊತೆಜೊತೆಗೆ ಮುಂದಿನ ಪೀಳಿಗೆಯಾದ ಮಕ್ಕಳನ್ನು ರಕ್ಷಿಸುವುದು ಸಹ ಸರ್ಕಾರಗಳ ಪ್ರಧಾನ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ.