ನವದೆಹಲಿ : ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 1849 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು ಸೋಂಕಿತರದಲ್ಲಿ 26,234 ಜನ ಗುಣಮುಖರಾಗಿದ್ದು, ದಿನದಿಂದ ದಿನಕ್ಕೆ ದೇಶದಲ್ಲಿ ಗುಣಮುಖರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ.
ಮೇ ತಿಂಗಳ 4ರಿಂದ ಪ್ರತಿದಿನ ದೇಶದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಅದರಲ್ಲೂ ಮೇ 10ರಿಂದ ಸತತ ಸಾವಿರದ ಐನೂರಕ್ಕೂ ಹೆಚ್ಚು ಜನ ಗುಣಮುಖರಾಗುತ್ತಿದ್ದಾರೆ. ನಿನ್ನೆ ಅಂದರೆ ಮೇ 13ರಂದು ಒಟ್ಟು 1,931 ಜನ ಗುಣಮುಖರಾಗಿದ್ದು, ಈವರೆಗಿನ ಅತಿ ಹೆಚ್ಚು ಒಂದೇ ದಿನದ ಗುಣಮುಖರ ಸಂಖ್ಯೆಯಾಗಿದೆ.
ಸದ್ಯ ದೇಶದಲ್ಲಿ ಗುಣಮುಖರ ಪ್ರಮಾಣ ಶೇ. 33.63 ರಷ್ಟಿದೆ. ಅಂದರೆ ಒಟ್ಟು 78,003 ಸೋಂಕಿತರಲ್ಲಿ 26,234 ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,722 ಹೊಸ ಪಾಸಿಟಿವ್ ಕೇಸ್ ವರದಿಯಾಗಿವೆ. ದೇಶದ ಒಟ್ಟು ಕೊರೊನಾ ಪ್ರಕರಣ ಸಂಖ್ಯೆ 78,003ಕ್ಕೇರಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ ಒಟ್ಟು 2,549 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ 134 ಜನ ಕಳೆದ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 49,219 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.