ನ್ಯೂಯಾರ್ಕ್: ಕೊರೊನಾ ವೈರಸ್ ಪ್ರಾಣಿಯಿಂದಲೇ ಮಾನವನಿಗೆ ಬಂದಿದ್ದು ಎಂದು ಹೇಳಲಾಗಿದೆ. ಆದರೆ ಈ ಕ್ರಿಯೆ ರಿವರ್ಸ್ ಸಹ ಆಗಬಹುದು ಎನ್ನಲಾಗಿದೆ. ಹೌದು, ಮನುಷ್ಯನಿಂದ ಪ್ರಾಣಿಗಳಿಗೆ ಕೊರೊನಾ ಹರಡಬಹುದು ಎಂಬುದು ಎಚ್ಚರಿಕೆಯ ಗಂಟೆಯಾಗಿದೆ.
ಮೊನ್ನೆಯಷ್ಟೇ ನ್ಯೂಯಾರ್ಕ್ನ ಝೂ ಒಂದರಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿದ್ದು ನಿಮಗೆ ಗೊತ್ತಿರಬಹುದು. ಝೂನಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದಲೇ ಹುಲಿಗೆ ಸೋಂಕು ತಗುಲಿತ್ತು ಎಂಬುದು ಗೊತ್ತಾಗಿದೆ. ಅಂದರೆ ಮನುಷ್ಯನಿಂದ ಪ್ರಾಣಿಗಳಿಗೆ ಕೊರೊನಾ ಹರಡುತ್ತದೆ ಎಂಬುದು ಸಾಬೀತಾಗುತ್ತಿದೆ ಎಂದು ಸಿಸಿಎಂಬಿ ಲೆಕೋನ್ಸ್ ನಿರ್ದೇಶಕ ಕಾರ್ತಿಕೇಯ ಹೇಳಿದ್ದಾರೆ.
ಕೊರೊನಾ ವೈರಸ್ ಈಗಾಗಲೇ ಅದೆಷ್ಟೋ ಮನುಷ್ಯರ ದೇಹ ಹೊಕ್ಕಿದೆ. ಸೋಂಕು ಇರುವ ಮನುಷ್ಯರಿಗೆ ತೀರಾ ಹತ್ತಿರದಲ್ಲಿರುವ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆಗಳು ತೀರಾ ಹೆಚ್ಚಾಗಿವೆಯಂತೆ. ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳಿಗೆ ಕೊರೊನಾ ಬರಬಹುದಂತೆ. ಆದರೂ ಕೊರೊನಾ ವೈರಸ್ ಪ್ರಾಣಿಯಿಂದಲೇ ಮಾನವನಿಗೆ ಬಂದಿದ್ದು ಎನ್ನಲು ಪ್ರಬಲ ಸಾಕ್ಷಿಗಳಿಲ್ಲ ಅಂತಾರೆ ವಿಜ್ಞಾನಿಗಳು.