ಲಖನೌ: ಲೋಕಸಭೆ ಚುನಾವಣೆಯ ಪ್ರತಿಷ್ಠೆ ಕಣ ಎನಿಸಿಕೊಂಡಿರುವ ಉತ್ತರಪ್ರದೇಶದಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಹೊಸ ಪ್ಲಾನ್ ಮಾಡಿದೆ. ಇದಕ್ಕಾಗಿ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿರುವುದು ಪ್ರಧಾನಿ ಮೋದಿಯ ಲೋಕಸಭೆ ಕ್ಷೇತ್ರ ವಾರಣಾಸಿ.
ಕಾಂಗ್ರೆಸ್ ಈಗಾಗಲೆ ಪ್ರಿಯಾಂಕಾ ಗಾಂಧಿಯನ್ನು ಪೂರ್ವ ಉತ್ತರಪ್ರದೇಶಕ್ಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಪ್ರಬಲ ಸ್ಪರ್ಧೆಯೊಡ್ಡಿದೆ ಎನ್ನಲಾಗ್ತಿದೆ. ಪ್ರಿಯಾಂಕಾ ಮೂಲಕವೇ ಮತದಾರರನ್ನು ಸೆಳೆಯಲು ಈಗ ಅವರ ಬೋಟ್ ರೈಡ್ ಪ್ಲಾನ್ ಮಾಡುತ್ತಿದೆ.
ಮೂಲಗಳು ತಿಳಿಸಿರುವಂತೆ, ಪ್ರಿಯಾಂಕಾ ಗಾಂಧಿ ಇದೇ ಮಾರ್ಚ್ 18ರಿಂದ 20ರವರೆಗೆ ವಾರಣಾಸಿಯಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಈ ವೇಳೆ ಅವರು ಬೋಟ್ ರೈಡಿಂಗ್ ಕೈಗೊಂಡು ಮತದಾರರಿಗೆ ಹತ್ತಿರವಾಗುವ ಯೋಜನೆ ರೂಪಿಸಿದ್ದಾರೆ. ಮಾರ್ಚ್ 18ಕ್ಕೆ ಪ್ರಯಾಗ್ರಾಜ್ಗೆ ಬರುವ ಪ್ರಿಯಾಂಕ ವಾರಣಾಸಿಗೆ ಬೋಟ್ ಮೂಲಕವೇ ಸಾಗಲಿದ್ದಾರೆ.
ಮೂರು ದಿನಗಳ ಕಾಲ ಬೋಟ್ನಲ್ಲಿ ಪ್ರಯಾಣ ಮಾಡುತ್ತಲೇ ಪ್ರಿಯಾಂಕಾ ಹಲವೆಡೆ ಸಭೆಗಳನ್ನು ನಡೆಸಲಿದ್ದಾರೆ ಎಂದೂ ತಿಳಿದುಬಂದಿದೆ.
ನರೇಂದ್ರ ಮೋದಿ ಸರ್ಕಾರ ಕಳೆದ ಐದು ವರ್ಷಗಳಿಂದ ಗಂಗೆಯ ಶುದ್ಧಿ ಮಾಡುತ್ತೇವೆ ಎಂದು ಹೇಳಿಯೂ, ವಿಫಲವಾಗಿರುವ ಬಗ್ಗೆ ಜನರ ಗಮನಕ್ಕೆ ತರುವುದು ಬೋಟ್ ರೈಡ್ ಉದ್ದೇಶ. ಗಂಗೆ ತಟದಲ್ಲಿರುವ ಜನರ ಸಮಸ್ಯೆಗಳ ಬಗ್ಗೆ ಆಲಿಸುವ ಉದ್ದೇಶವೂ ಇದೆ ಎಂದು ತಿಳಿದುಬಂದಿದೆ.