ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬಳಿಕ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಶಾಸಕರು ಸ್ವಪಕ್ಷ ತೊರೆದು ಬೇರೊಂದು ಪಕ್ಷಕ್ಕೆ ಹಾರುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ 10ಕ್ಕೂ ಅಧಿಕ ಶಾಸಕರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟು 288 ಶಾಸಕರ ಬಲ ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ 42 ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿಯ 122, ಶಿವ ಸೇನಾದ 63 ಹಾಗೂ ಎನ್ಸಿಪಿಯ 42 ಶಾಸಕರಿದ್ದಾರೆ. ಇನ್ನೂ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಲಿದ್ದು, ಅದಕ್ಕೂ ಮೊದಲೇ ಕಾಂಗ್ರೆಸ್ ಸ್ಥಳೀಯ ನಾಯಕರು ಸಡ್ಡು ಹೊಡೆದು ಪಕ್ಷ ತೊರೆಯುತ್ತಿದ್ದಾರೆ. ಇದು ರಾಜ್ಯ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಕಾಂಗ್ರೆಸ್ ಮುಖಂಡ ರಾಧಾಕೃಷ ವಿಖೆ ಪಾಟೀಲ್ ಅವರು ಈಗಾಗಲೇ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇವರ ಹಿಂದೆಯೇ ಇನ್ನಷ್ಟು ಶಾಸಕರು ಕೈತೊರೆದು ಕಮಲ ಪಾಳೆಯ ಸೇರಲಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸಿನ ಹಿರಿಯ ಮುಖಂಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ರಾಜ್ಯ ಘಟಕದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಬೆಳವಣಿಗೆಗಳು ಕಾಣಿಸಿಕೊಳ್ಳುತ್ತಿಲ್ಲ. ವಿಖೆ ಪಾಟೀಲ್ ಬಿಜೆಪಿ ಸೇರಿದ ಎರಡು ದಿನಗಳಲ್ಲಿ ಅಬ್ದುಲ್ ಸತ್ತಾರ್, ನಿತೀಶ್ ರಾಣೆ ಮತ್ತು ಕಾಳಿದಾಸ್ ಕೊಲಂಬ್ಕರ್ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ದೂರಿದ್ದಾರೆ.
ಪಾಟೀಲ್ ಅವರ ಪುತ್ರ ಸುಜಯ್ ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದಾಗ ಬಿಜೆಪಿ ಸೇರಿ ಸಂಸತ್ಗೆ ಆಯ್ಕೆಯಾದರು. ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಪಾಟೀಲ್ ಪ್ರಚಾರದಲ್ಲಿ ಭಾಗಿ ಆಗಿರಲಿಲ್ಲ. ಈಗ ಅವರು ಪಕ್ಷ ತೋರೆದಿದ್ದಾರೆ.
ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಸೋಲಿನ ಕಹಿ ಅನುಭವಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿತ್ತು. ಇಲ್ಲಿಯೂ ಕೂಡು ಅವರ ನಾಯಕತ್ವದ ವಿರುದ್ಧ ಅಪಸ್ವರ ಕೇಳಿಬರುತ್ತಿದೆ.