ಜೈಪುರ : ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್, ಸೇವಾ ದಳದ ಅಧ್ಯಕ್ಷ ರಾಕೇಶ್ ಪರೀಕ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಮುಖೇಶ್ ಭಾಕರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ, ರಾಜಸ್ಥಾನ ಕಾಂಗ್ರೆಸ್ನಲ್ಲಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಜ್ಯ ಕಾರ್ಯಕಾರಿಣಿಯನ್ನು ಸಂಪೂರ್ಣ ವಿಸರ್ಜಿಸಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ರಾಜ್ಯ ಕಾರ್ಯಕಾರಿಣಿಯನ್ನು ವಿಸರ್ಜಣೆ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ನಿನ್ನೆಯಷ್ಟೆ ನೇಮಕಗೊಂಡಿರುವ ನೂತನ ಅಧ್ಯಕ್ಷ ಗೋವಿಂದ ದೋಟಾಸರ ಎಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಕೇವಲ ರಾಜ್ಯ ಕಾರ್ಯಕಾರಿಣಿ ಮಾತ್ರವಲ್ಲದೇ, ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ.
ರಾಜ್ಯ ಕಾಂಗ್ರೆಸ್ಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ತಿಳಿಸಿದ್ದು, ಶೀಘ್ರದಲ್ಲೇ ಹೊಸ ಕಾರ್ಯಕಾರಿಣಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷರ ಅನುಮತಿಯಿಲ್ಲದೇ ಯಾರೂ ಮಾಧ್ಯಮಗಳಿಗೆ ಹೇಳಿಕೆ ಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪಕ್ಷದ ವಿರುದ್ದ ಬಂಡಾಯ ಎದ್ದ ಹಿನ್ನೆಲೆ ಉಪಮುಖ್ಯಂತ್ರಿ ಮತ್ತು ಪಿಸಿಸಿ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ, ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸರ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪೈಲಟ್ ಮಾತ್ರವಲ್ಲದೇ ಅವರ ಜೊತೆ ಗುರುತಿಸಿಕೊಂಡಿದ್ದ ವಿಶ್ವವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ.