ನವದೆಹಲಿ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ರಾಜಕೀಯ ಉದ್ದೇಶಗಳಿಗಾಗಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದು ನರೇಂದ್ರ ಮೋದಿಯವರ "ನವ ಭಾರತ" ದಲ್ಲಿ "ಹೊಸ ಕಾನೂನು" ಎಂದು ಕಾಂಗ್ರೆಸ್ ಹೇಳಿದೆ.
ಬಿಹಾರ ಬಿಜೆಪಿ ಘಟಕ ಇತ್ತೀಚೆಗೆ ಸುಶಾಂತ್ ಸಿಂಗ್ ಫೋಟೋಗಳಿರುವ ಪೋಸ್ಟರ್ ಮತ್ತು ಸ್ಟಿಕ್ಕರ್ಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಮೇಲೆ 'ನಾವು ಮರೆತಿಲ್ಲ, ನಾವು ಮರೆಯುವುದೂ ಇಲ್ಲ' ಎಂದು ಬರೆಯಲಾಗಿತ್ತು. ದಿವಂಗತ ನಟನ ಕುರಿತು ಎರಡು ಎಪಿಸೋಡ್ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಬಿಜೆಪಿ ಯೋಚಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಆರೋಪ ಮಾಡಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಇದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಭಾರತದಲ್ಲಿ ಹೊಸ ನಿಯಮವಾಗಿದೆ. ಬಿಹಾರದಲ್ಲಿ ಪ್ರವಾಹದಿಂದ ಭಾರೀ ಹಾನಿಯಾಗಿದೆ. ಸುಮಾರು 4 ಲಕ್ಷ ಜನ ನಿರುದ್ಯೋಗಿಗಳಾಗಿದ್ದಾರೆ. ಜನ ತಿನ್ನಲು ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ತನ್ನ ಜವಾಬ್ದಾರಿಯನ್ನು ಸಂಪೂರ್ಣ ಮರೆತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಬೆಂಬಲಿತ ಆಡಳಿತದಲ್ಲಿ ರಾಜ್ಯದ ಆಡಳಿತ ಯಂತ್ರ ಕೊಳಗೇರಿಗಳ ಕೆಸರಿನಲ್ಲಿ ಹುದುಗಿಹೋಗಿದೆ. ಈ ನಡುವೆ ಇವರು ನಟನ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.