ಹೈದರಾಬಾದ್: ಅಂದು ನವೆಂಬರ್ 28 ಬುಧವಾರ, 'ಅಕ್ಕಾ ನನಗೆ ಭಯವಾಗುತ್ತಿದೆ. ನನ್ನ ಬೈಕ್ ಪಂಕ್ಚರ್ ಆಗಿದೆ' ಎಂದು ಆ ರಾತ್ರಿ ಫೋನ್ ಮಾಡಿದ ಸ್ವಲ್ಪ ಗಳಿಗೆಯಲ್ಲಿ ಮೃಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ತಾಯಿ ಹೃದಯದ ಹೆಣ್ಣನ್ನು ದುರುಳರು ಮುಕ್ಕಿ ತಿಂದಿದ್ದರು. ಈಗ ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಂತೆ ಆಗಿದೆ.
ಹೌದು.., ಶಂಶಾಬಾದ್ನ ಹೊರವಲಯದಲ್ಲಿ ವೈದ್ಯೆ ಮೇಲಿನ ಅಮಾನವೀಯ ಕೃತ್ಯ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು ಎಲ್ಲೆಡೆ ಜನರು ಕಂಬನಿ ಮಿಡಿದಿದ್ದರು. ಈಗ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಇಹಲೋಕ ಬಿಡುವಂತೆ ಮಾಡಿದ್ದು, ದೇಶಕ್ಕೆ ಒಳ್ಳೆಯ ಸಂದೇಶ ರವಾನೆ ಮಾಡಿದ್ದಾರೆ. ಆರೋಪಿಗಳಾದ ಮೊಹಮದ್ ಆರಿಫ್, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್ರಿಗೆ ಒಳ್ಳೆಯ ಶಿಕ್ಷೆ ನೀಡಿದ್ದಾರೆ.
ಸೈಬರಾಬಾದ್ ಪೊಲೀಸ್ ಕಮಿಷನರ್ ಸಿ.ಪಿ. ಸಜ್ಜನರ್ ಅವರು ಈ ಎನ್ಕೌಂಟರ್ ಹಿಂದಿನ ವ್ಯಕ್ತಿ ಎಂದೇ ಹೇಳಲಾಗುತ್ತಿದೆ. ದೇಶಾದ್ಯಂತ ವೈದ್ಯೆ ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ಕಾವು ಹೆಚ್ಚಾಗಿತ್ತು, ಆರೋಪಿಗಳನ್ನು ತಕ್ಷಣವೇ ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ತೆಲಂಗಾಣ ಸರ್ಕಾರದ ಮೇಲೆ ಒತ್ತಡ ಕೂಡ ಹೆಚ್ಚಾಗಿತ್ತು. ಇದಕ್ಕೆ ಪೂರಕ ಎಂಬಂತೆ ಪ್ರಕರಣ ವಿಚಾರಣೆಗಾಗಿ ಆರೋಪಿಗಳನ್ನು ಹತ್ಯೆ ನಡೆದ ಜಾಗಕ್ಕೆ ಕರೆದೊಯ್ಯಲಾಗಿತ್ತು. ಮಾಹಿತಿ ಪ್ರಕಾರ, ಆರೋಪಿಗಳು ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಎನ್ಕೌಂಟರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಎನ್ ಕೌಂಟರ್ ನಡೆದಿದ್ದು ಹೇಗೆ:
ಹೆಚ್ಚಿನ ತನಿಖೆ ಉದ್ದೇಶದಿಂದ ಆರೋಪಿಗಳನ್ನ ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಹೇಗೆಲ್ಲ ಹತ್ಯೆ ನಡೆಯಿತು ಎಂಬ ಮರುಸೃಷ್ಟಿ ಚಿತ್ರೀಕರಣ ಮಾಡುವಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳನ್ನ ಎನ್ಕೌಂಟರ್ ಮಾಡಿದ್ದಾರೆ.
ಘಟನೆ ನಡೆದದ್ದು ಹೇಗೆ:
ನವೆಂಬರ್ 28 ಬುಧವಾರ ರಾತ್ರಿ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಿಂದ ತೆರಳುತ್ತಿದ್ದ ವೇಳೆ ಅವರ ದ್ವಿಚಕ್ರ ವಾಹನ ಪಂಕ್ಚರ್ ಆಗಿತ್ತು. ಈ ವೇಳೆ ತಕ್ಷಣವೇ ತನ್ನ ಸಹೋದರಿ ಜತೆ ರಾತ್ರಿ 9.15ಕ್ಕೆ ಕರೆ ಮಾಡಿ ಮಾತನಾಡಿದ್ದಾರೆ. ಆ ವೇಳೆ ಹತ್ತಿರದ ಟೋಲ್ಗೇಟ್ ಬಳಿ ಹೋಗಿ ಕಾಯುವಂತೆ ಸೋದರಿ ಮರು ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲಿಗೆ ತೆರಳಿದಾಗ ನಾಲ್ವರು ಕಾಮುಕರು ಆಕೆಯನ್ನ ಅಪಹರಿಸಿ ಟೋಲ್ಗೇಟ್ನ ಹಿಂದಿನ ಖಾಲಿ ಜಾಗದಲ್ಲಿ ಅತ್ಯಾಚಾರವೆಸಗಿ, ಕೊಲೆ ಮಾಡಿ ಮೃತದೇಹ ಶಾದ್ನಗರದಿಂದ ಸುಮಾರು 30 ಕಿಲೋಮೀಟರ್ ದೂರದ ಬ್ರಿಡ್ಜ್ ಕೆಳಗೆ ಸುಟ್ಟಿದ್ದಾರೆ.
ಘಟನೆ ನಡೆದ ಸಂಕ್ಷಿಪ್ತ ಚಿತ್ರಣ:
ನ. 29 ರಂದು ಬಂಧನ :
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪ್ರಕರಣ ನಡೆದ ಒಂದೇ ದಿನದಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಶೀಘ್ರವೇ ಬಂಧಿಸಿದ್ದರು.
14 ದಿನ ನ್ಯಾಯಾಂಗ ಬಂಧನ:
ನಂ 30 ರಂದು ರಂಗಾರೆಡ್ಡಿ ಕೋರ್ಟ್, 14 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ, ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಶಾದ್ನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಂ 30. ಮೂವರು ಪೊಲೀಸರ ಅಮಾನತು:
ಮೃತಳ ಪೋಷಕರು ದೂರು ನೀಡಲು ಬಂದಾಗ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಶಾದ್ನಗರ ಠಾಣೆಯ ಮೂವರು ಪೊಲೀಸರನ್ನು ಅಮಾನತುಗೊಳಿದ್ದರು.
ತೆಲಂಗಾಣ ಜೈಲಿನಲ್ಲಿ ಭಾರೀ ಭದ್ರತೆ:
ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ ನಂತರ ಜೈಲಿನಲ್ಲಿ ಭಾರೀ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಕಾರಣ ಇಡೀ ದೇಶ ಈ ದುರಂತದಿಂದ ಆಕ್ರೋಶಗೊಂಡಿತ್ತು. ಅಲ್ಲದೆ, ಆರೋಪಿಗಳು ಜೈಲಿನಲ್ಲಿ ಇದ್ದ ವೇಳೆ ಅವರಿಗೆ ಮಟನ್ ಕರಿ ನೀಡಿದ್ದರು ಎಂಬ ಸುದ್ದಿಯೂ ಎಲ್ಲೆಡೆ ಹರಿದಾಡಿ . ಇದಕ್ಕೆ ತೀವ್ರ ಆಕ್ರೋಶ ಜನಸಾಮಾನ್ಯರಿಂದ ಕೇಳಿಬಂದಿತ್ತು.
ನ. 29: ಹತ್ಯೆಗೈದ ಸ್ಥಳದಲ್ಲೇ ಮತ್ತೊಂದು ಮಹಿಳೆ ಶವ ಪತ್ತೆ:
ಹೈದರಾಬಾದ್ನ ಹೊರವಲಯದ ಶಂಶಾಬಾದ್ನಲ್ಲಿ ಪಶುವೈದ್ಯೆಯ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲೇ ಮತ್ತೊಂದು ಯುವತಿ ದೇಹ ಪತ್ತೆಯಾಗಿತ್ತು.
ನಂ 30, ದಿಶಾ ಪ್ರಕರಣದ ನಂತರ ಮತ್ತೊಂದು ಕೇಸ್ :
ವೈದ್ಯೆ ಮೇಲೆ ಅತ್ಯಾಚಾರ ನಡೆದ ಕೊಂಚ ದೂರದಲ್ಲಿಯೇ ಮಹಿಳೆ ಕಿಡ್ನಾಪ್ ಮಾಡಲಾಗಿತ್ತು ಒಂದಾದ ಮೇಲೊಂದರಂತೆ ನಡೆದ ಘಟನೆಯಿಂದ ಮುತ್ತಿನ ನಗರಿ ಬೆಚ್ಚಿಬಿದ್ದಿತ್ತು. ಮಹಿಳೆಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ಯುತ್ತಿರುವುದನ್ನು ಅಂದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರಾಜೇಂದ್ರನಗರ್, ಮೈಲಾರ್ದೇವ್ಪಲ್ಲಿ ನಗರದ ಪೊಲೀಸರು ತನಿಖೆ ಕೈಗೊಂಡು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪಹರಣಗೊಂಡ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.
ಎನ್ಕೌಂಟರ್ಗೆ ಆಗ್ರಹ:
ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿ ಇವರನ್ನು ಬಂಧಿಸಿದ್ದ ಪೊಲೀಸ್ ಠಾಣೆಯ ಹೊರಗಡೆ ಉದ್ವಿಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗದಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಕೂಡ ಮಾಡಿದ್ದರು. ಈ ವೇಳೆ ಹಿಂಭಾಗಿಲಿನಿಂದ ಪೊಲೀಸ್ ಠಾಣೆಗೆ ಮ್ಯಾಜಿಸ್ಟ್ರೇಟ್ ಅವರನ್ನು ಕರೆತರಲಾಗಿತ್ತು.ಮೃತ ಪಶುವೈದ್ಯೆಯ ಮನೆಗೆ ತೆಲಂಗಾಣ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ದಿಗ್ಗಜರ ಕಂಬನಿ:
ಈ ಘಟನೆಯಿಂದ ನೊಂದ ಹಲವಾರು ದೊಡ್ಡ ದೊಡ್ಡ ವ್ಯಕ್ತಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು, ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದ ಆಗ್ರಹ ಮಾಡಿದ್ದರೆ, ಇದಲ್ಲದೆ, ಪ್ರಾಂತ್ಯಬೇಧ ವಿಲ್ಲದೆ ಇಡೀ ರಾಷ್ಟ್ರ ಒಕ್ಕೊರಲಿನಿಂದ ಆರೋಪಿಗಳ ವಿರುದ್ಧ ಧ್ವನಿ ಎತ್ತಿತ್ತು ಈಗ ಅದೆಲ್ಲಕ್ಕೂ ತೆಲಂಗಾಣ ಪೊಲೀಸರು ಉತ್ತರ ಕೊಟ್ಟಿದ್ದಾರೆ.
ಡಿ. 01 : ಸಿಎಂ ಸಂತಾಪ:
ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತ್ವರಿತ ವಿಚಾರಣೆ ನಡೆಸಲು ತ್ವರಿತಗತಿ ವಿಚಾರಣಾ ನ್ಯಾಯಾಲಯ ಸ್ಥಾಪನೆಗೆ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ ರಾವ್ ಆದೇಶ ನೀಡಿದ್ದರು. ಮೃತ ಪಶುವೈದ್ಯೆಯ ಕುಟುಂಬಕ್ಕೆ ಅಗತ್ಯವಾದ ಎಲ್ಲ ನೆರವನ್ನೂ ನೀಡುವ ಭರವಸೆ ಕೂಡ ನೀಡಿದ್ದರು.
ಆಕೆಯ ಆತ್ಮಕ್ಕೆ ಈಗ ಶಾಂತಿ ಸಿಗಲಿದೆ:
ತಮ್ಮ ಮಗಳನ್ನು ಕೊಂದ ಪಾಪಿಗಳನ್ನು ಎನ್ಕೌಂಟರ್ ಮಾಡಿರುವ ಹೈದರಾಬಾದ್ ಪೊಲೀಸರ ನಡೆಗೆ ಸಂತ್ರಸ್ತೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇಂದಿಗೆ ಆಕೆ ನಮ್ಮನ್ನು ಅಗಲಿ ಹತ್ತು ದಿನಗಳಾಯ್ತು. ನನ್ನ ನೋವನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದೆ.ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.