ತೇಜ್‌ಪುರ (ಅಸ್ಸೋಂ): ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ಶಿಲಾನ್ಯಾಸ ಸಮಾರಂಭ್ರಮಾಚರಣೆಯ ವೇಳೆ ನಗರದಲ್ಲಿ ಭಜರಂಗದಳದ ಕಾರ್ಯಕರ್ತರು ಬೈಕ್ ರ್ಯಾಲಿ ಆಯೋಜಿಸಿದ್ದರು. ಈ ವೇಳೆ ಎರಡು ಕೋಮಿನ ನಡುವೆ ಸಂಘರ್ಷ ಏರ್ಪಟ್ಟು ವಾಹನಗಳು ಸುಡಲಾಗಿದೆ.
ಕೋಮು ಸಂಘರ್ಷದ ವೇಳೆ ಅನೇಕ ಬೈಕ್ ಹಾಗೂ ಇತರೆ ವಾಹನಗಳು ಸುಟ್ಟು ಹೋಗಿವೆ. ಗಲಭೆ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥೆಲಮರ ಮತ್ತು ಧೇಕಿಯಾಜುಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಥೆಲಮರ ಪೊಲೀಸ್ ಠಾಣೆ ವ್ಯಾಪ್ತಿಯ ಭೋರಾ ಸಿಂಗೋರಿಯ ಶಿವ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಬೈಕ್ ಸವಾರರು ರ್ಯಾಲಿ ಮೂಲಕ ತೆರಳುತ್ತಿದ್ದರು. ಈ ಜೋರಾಗಿ ಸಂಗೀತ ನುಡಿಸುತ್ತಾ, ಘೋಷಣೆಗಳನ್ನು ಕೂಗುತ್ತಿದ್ದಾಗ ಕೋಮು ಗಲಭೆ ನಡೆದಿದೆ.
ತಮ್ಮ ಪ್ರದೇಶದಲ್ಲಿ ಗುಂಪು ಗೂಡಿ ಸಂಭ್ರಮಾಚರಣೆ ಮಾಡುತ್ತಾ ಜೋರಾಗಿ ಸಂಗೀತ ನುಡಿಸುತ್ತಿದ್ದ ಭಜರಂಗ ದಳದ ಕಾರ್ಯಕರ್ತ ನಡೆಗೆ ಸ್ಥಳೀಯರು ಆಕ್ಷೇಪಿಸಿದರು. ಜನರು ಕೋವಿಡ್-19 ರೋಗದ ವಿರುದ್ಧ ಹೋರಾಡುತ್ತಿರುವಾಗ ರ್ಯಾಲಿ ಆಯೋಜಿಸುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದ್ದರು. ಇದು ವಾಗ್ದಾಳಿಗೆ ಕಾರಣವಾಗಿ ಅಂತಿಮವಾಗಿ ಕೋಮು ಘರ್ಷಣೆಯ ರೂಪ ಪಡೆದುಕೊಂಡಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಕ್ಷಣವೇ ಸೋನಿತ್‌ಪುರ ಜಿಲ್ಲಾ ಜಿಲ್ಲಾಧಿಕಾರಿ ಮನ್ವೇಂದ್ರ ಪ್ರತಾಪ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಆಗಮಿಸಿದರು. ಎರಡು ಗುಂಪುಗಳ ಕಿಡಿಗೇಡಿಗಳು ಡಿಸಿ ಮೇಲೆ ಕಲ್ಲು ತೂರಿದರು. ಈ ವೇಳೆ ಮಲ್ಟಿ-ಯುಟಿಲಿಟಿ ವಾಹನದ ಮುಂಭಾಗದ ವಿಂಡ್‌ಸ್ಕ್ರೀನ್ ಜಖಂಗೊಂಡಿದೆ.
ಪರಿಸ್ಥಿತಿಯ ಮೇಲ್ವಿಚಾರಣೆಗೆ ಪೊಲೀಸ್ ವರಿಷ್ಠಾಧಿಕಾರಿ ಮುಗ್ಧಜೋತಿ ದೇವ್ ಮಹಂತಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಕೋಮು ಸಂಘರ್ಷವಾಗಿ ಬದಲಾದ ಪರಿಸ್ಥಿತಿಯನ್ನು ನಿಯಂತ್ರಿಸಲು, ಪೊಲೀಸರು ಮೊದಲು ಲಾಠಿ ಚಾರ್ಜ್ ಮಾಡಿ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದರು. ಅನೇಕ ಬೈಕ್ ಮತ್ತು ಇತರ ವಾಹನಗಳು ಸುಟ್ಟುಹೋಗಿವೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದೇವೆ ಎಂದು ಸಿಂಗ್ ಹೇಳಿದರು.
ಮೆರವಣಿಗೆ, ಬೈಕ್ ರ್ಯಾಲಿ ನಡೆಸಲು ಸ್ಥಳೀಯ ಆಡಳಿತ ಯಾವುದೇ ಅನುಮತಿ ನೀಡರಲಿಲ್ಲ. ಇದೇ ವೇಳೆ ರ್ಯಾಲಿಯ ಓರ್ವ ಬೈಕ್ ಸವಾರ ಮತ್ತು ಸ್ಥಳೀಯರೊಬ್ಬರು ನಡುವೆ ಸಣ್ಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.