ನವದೆಹಲಿ: ಸಾಮಾನ್ಯ ಜನರ ದೀಪಾವಳಿ ಕೇಂದ್ರ ಸರ್ಕಾರದ ಕೈಯಲ್ಲಿದ್ದು ಸುಮಾರು 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ನಿರ್ಧಾರವನ್ನು ಆದಷ್ಟು ಬೇಗ ಜಾರಿಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಮಾರು 8 ವಿಭಾಗಗಳಲ್ಲಿನ ಸಾಲದ ಮೇಲಿನ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಈಗಾಗಲೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದು ಸರ್ಕಾರದ ಕಡೆಯಿಂದ ನ್ಯಾಯಸಮ್ಮತವಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಜೊತೆಗೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಆರ್.ಸುಭಾಷ್ ರೆಡ್ಡಿ ಈ ಪೀಠದಲ್ಲಿದ್ದು, ಸರ್ಕಾರ ನಿರ್ಧಾರ ತೆಗೆದುಕೊಂಡ ಮೇಲೆ ವಿಳಂಬವಾಗುತ್ತಿರುವುದೇಕೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆಹ್ತಾ, ಸರ್ಕಾರವು ಸಾಮಾನ್ಯ ಜನರ ದುಃಸ್ಥಿತಿಯನ್ನು ಪರಿಗಣಿಸಿದೆ ಮತ್ತು ಕೆಲವು ವಿಧಿವಿಧಾನಗಳನ್ನು ಪೂರ್ಣಗೊಳಿಸಬೇಕಾಗಿದೆ ನಂತರ ಸರ್ಕಾರದ ಆದೇಶವನ್ನು ಜಾರಿಗೊಳಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಜಾರಿಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಬೇಕೆಂದು ನ್ಯಾ.ಭೂಷಣ್ ಸೂಚನೆ ನೀಡಿದರು. ನಂತರ ಮಾತನಾಡಿದ ನ್ಯಾ.ಯಮೂರ್ತಿ ಶಾ ಸಾಮಾನ್ಯ ಜನರ ದೀಪಾವಳಿ ಸರ್ಕಾರದ ಕೈಯಲ್ಲಿದೆ ಎಂದು ಹೇಳಿ ಕೇಂದ್ರ ಸರ್ಕಾರದ ನಿರ್ಧಾರದ ಮಹತ್ವವನ್ನು ಮಾರ್ಮಿಕವಾಗಿ ನುಡಿದರು.
ಸದ್ಯಕ್ಕೆ ಇದೇ ವಿಚಾರವಾಗಿ ಸುಪ್ರೀಂಕೋರ್ಟ್ ನವೆಂಬರ್ 2ಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ಈ ವೇಳೆಗೆ ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.