ಪಣಜಿ( ಗೋವಾ): ಕಮಾಂಡರ್ ಅಜಯ್ ಡೇನಿಯಲ್ ಥಿಯೋಫಿಲಸ್ ಅವರು ಐಎನ್ಎಸ್ ಹನ್ಸಾದ ಯುದ್ಧವಿಮಾನ ವಾಹಕ ನೌಕೆಯ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು.
ಕಮಾಂಡರ್ ಥಿಯೋಫಿಲಸ್ ನೇವಲ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, 1991ರ ಜುಲೈ 01 ರಂದು ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದರು.
ಥಿಯೋಫಿಲಸ್ ಅವರು ಫೈಟರ್ ಪೈಲಟ್ ಆಗಿದ್ದು, ಯುದ್ಧ ವಿಮಾನಯಾನದಲ್ಲಿ ಹೆಚ್ಚಿನ ನಿಪುಣತೆ ಹೊಂದಿದ್ದಾರೆ. ಉತ್ತಮ ಬೋಧಕರೂ ಕೂಡಾ ಆಗಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ವಿಮಾನಗಳಲ್ಲಿ ಸುಮಾರು 3000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ. ಇವರು ನೇವಲ್ ಏರ್ ಸ್ಕ್ವಾಡ್ರನ್ ಐಎನ್‌ಎಎಸ್ 303 ರ ಮೊದಲ ಕಮಾಂಡಿಂಗ್ ಅಧಿಕಾರಿಯಾಗಿದ್ದಾರೆ.
ಮಿಗ್ -29 ಕೆ ವಿಮಾನವನ್ನು ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯಕ್ಕೆ ಇಳಿಸಿದ ಮೊದಲ ಭಾರತೀಯ ಪೈಲಟ್ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಮುಂಚೂಣಿ ಯುದ್ಧನೌಕೆಗಳಾದ ಐಎನ್‌ಎಸ್ ಸುಕನ್ಯಾ, ಐಎನ್‌ಎಸ್ ತಲ್ವಾರ್ ಮತ್ತು ಐಎನ್‌ಎಸ್ ತರ್ಕಶ್‌ಗೂ ಇವರು ಕಮಾಂಡ್ ಮಾಡಿದ್ದಾರೆ.
ಪ್ರಸ್ತುತ ನೇಮಕಾತಿಗೆ ಮುಂಚಿತವಾಗಿ, ಕಮಾಂಡರ್ ಅವರು ನೌಕಾ ಪ್ರಧಾನ ಕಚೇರಿಯಲ್ಲಿ ವಾಯು ಯುದ್ಧ ಮತ್ತು ವಿಮಾನ ಸುರಕ್ಷತೆಯ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದರು.