ಸಾರಾಂಶ: ಸದ್ಯದ ಪರಿಸ್ಥಿತಿಯಲ್ಲಿ ಉದ್ಯಮದ ಪರಿಣಿತರು ಮತ್ತು ಯೆಸ್ ಬ್ಯಾಂಕ್ ಗ್ರಾಹಕರನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆಯೆಂದರೆ, ಬ್ಯಾಂಕ್‌ನಲ್ಲಿ ಉಂಟಾದ ಸಮಸ್ಯೆ ಏನು, ಸಮಸ್ಯೆಯನ್ನು ನಿವಾರಿಸಬಹುದಿತ್ತೇ?, ಠೇವಣಿದಾರರ ಮೊತ್ತದ ಕಥೆ ಏನಾಯಿತು, ಬ್ಯಾಂಕ್‌ನ ಭವಿಷ್ಯವೇನು ಇತ್ಯಾದಿ. ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಆಂಡ್ ರಿಸ್ಕ್ ಮ್ಯಾನೇಜ್‌ಮೆಂಟ್ ಐಐಆರ್‌ಎಂನ ಪ್ರೊಫೆಸರ್ ಡಾ. ಕೆ.ಶ್ರೀನಿವಾಸ ರಾವ್ ಈ ಕುರಿತು ಬೆಳಕು ಚೆಲ್ಲಿದ್ದಾರೆ.
ಯೆಸ್ ಬ್ಯಾಂಕ್ ಬಂಡವಾಳವನ್ನು ನಿರ್ವಹಿಸಲು ಅಸಾಧ್ಯವಾಗಿರುವುದು ಮತ್ತು ಸ್ವತ್ತು ಗುಣಮಟ್ಟ ಕುಸಿಯುತ್ತಿರುವ ಕಾರಣಕ್ಕೆ 2020 ಏಪ್ರಿಲ್ 3 ರ ವರೆಗೆ ಯೆಸ್ ಬ್ಯಾಂಕ್ ಅನ್ನು ಮೊರಟೋರಿಯಂನಲ್ಲಿ ಇಟ್ಟಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಕಠಿಣವಾದ ಕ್ರಮಗಳಾದ ಠೇವಣಿ ಹಿಂಪಡೆತವನ್ನು ನಿಗದಿಸುವುದು ಹಾಗೂ ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಉಂಟು ಮಾಡುವುದರಿಂದಾಗಿ ಗ್ರಾಹಕರಿಗೆ ಭಾರಿ ಪ್ರಮಾಣದ ತೊಂದರೆ ಉಂಟಾಗಲಿದೆ. ಖಾಸಗಿ ಬ್ಯಾಂಕ್‌ಗಳ ಮೇಲೆ ಸಾರ್ವಜನಿಕರು ಕಳೆದುಕೊಳ್ಳುವ ವಿಶ್ವಾಸದಿಂದ ಉಂಟಾಗುವ ಹಾನಿಯ ಪ್ರಮಾಣ ಅಪಾರವಾದದ್ದು.
ಬ್ಯಾಂಕ್‌ನ ಗ್ರಾಹಕರ ಪ್ರೊಫೈಲ್ ಅನ್ನು ನೋಡಿದರೆ 50 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ಹಿಂಪಡೆಯದಂತೆ ನಿರ್ಬಂಧ ವಿಧಿಸಿರುವುದು ಯಾವುದೇ ಮಹತ್ವದ ಬದಲಾವಣೆಗೆ ಕಾರಣವಾಗುವುದಿಲ್ಲ. ಉಳಿತಾಯದ ಮೇಲೆ ಹೆಚ್ಚಿನ ಬಡ್ಡಿ ಮತ್ತು ಇತರ ನವೀನ ತಂತ್ರಜ್ಞಾನ ಆಧರಿತ ಉತ್ಪನ್ನಗಳಿಂದಾಗಿ ಯೆಸ್ ಬ್ಯಾಂಕ್ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರನ್ನು ಗಳಿಸಿಕೊಂಡಿತ್ತು. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹುಟ್ಟಿದ ಅಭಿಪ್ರಾಯಗಳು ಬ್ಯಾಂಕ್‌ನ ಮೇಲೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಬಲ್ಲದು.
ಇದರ ಪರಿಣಾಮವಾಗಿಯೇ ಯೆಸ್ ಬ್ಯಾಂಕ್‌ನ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಶೇ. 85 ರಷ್ಟು ಮೌಲ್ಯವು ಕುಸಿತವಾಗಿದ್ದು ಕೋಟ್ಯಂತರ ಹೂಡಿಕೆದಾರರಿಗೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಇದು ಇತರ ಸಂಸ್ಥೆಗಳ ಹೂಡಿಕೆದಾರರ ದೃಷ್ಟಿಕೋನವನ್ನೂ ಬದಲಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಸಾಮಾನ್ಯವಾಗಿ ರಿಸ್ಕ್ ಆಧರಿತ ಮೇಲ್ವಿಚಾರಣೆ ವ್ಯವಸ್ಥೆಯನ್ನು ಹೊಂದಿದ್ದಾಗ, ಬ್ಯಾಂಕ್‌ನ ಅಸೆಟ್ ಗುಣಮಟ್ಟದ ಸಮಸ್ಯೆ, ಬಂಡವಾಳ ಸಾಮರ್ಥ್ಯ ಅನುಪಾತ (ಸಿಎಆರ್) ಮತ್ತು ಕ್ಷೀಣ ಕಾರ್ಪೊರೇಟ್ ಆಡಳಿತ ಕ್ರಮಗಳು ಆರ್‌ಬಿಐನ ಕಣ್ಣು ತಪ್ಪಿಸಿಕೊಂಡು ಮುಂದುವರಿಯಬಹುದು. ಬಂಡವಾಳ ಕಡಿಮೆಯಾಗುವುದು ಮತ್ತು ದ್ರವ್ಯತೆಯ ಮೇಲೆ ಒತ್ತಡ ಹೆಚ್ಚಾಗುವುದು ಕಾರಣವಾದರೆ, ಈಗಿನ ಒತ್ತಡದ ಪರಿಸ್ಥಿತಿ ಉಂಟಾಗುವ ಅಗತ್ಯವಿರಲಿಲ್ಲ. ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಇಡೀ ಖಾಸಗಿ ಬ್ಯಾಂಕ್‌ಗಳ ಗೌರವವನ್ನೂ ಉಳಿಸಬಹುದಾಗಿತ್ತು.
ಪ್ರಮುಖ ಖಾಸಗಿ ಬ್ಯಾಂಕ್:
ಯೆಸ್ ಬ್ಯಾಂಕ್ ಶುರುವಾಗಿದ್ದು 2004 ರಲ್ಲಿ. ಇದು 4ನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿ ಹೊರಹೊಮ್ಮಿತು. ವೃತ್ತಿಪರರು ಇದನ್ನು ನಿರ್ವಹಿಸುತ್ತಿದ್ದುದರಿಂದ 15 ವರ್ಷಗಳಲ್ಲೇ ಮಹತ್ವದ ಬ್ಯಾಂಕ್ ಆಗಿ ಹೊರಹೊಮ್ಮಿತು. ಸ್ವತ್ತು ಗಾತ್ರ 3.62 ಲಕ್ಷ ಕೋಟಿ ರೂ. ಆಯಿತು ಮತ್ತು 2019 ಮಾರ್ಚ್‌ವರೆಗೆ ಶೇ. 15.7 ರಷ್ಟು ಸಿಎಆರ್ ಅನ್ನು ನಿರ್ವಹಿಸಲಾಯಿತು. ಒಟ್ಟಾರೆ ಎನ್‌ಪಿಎ ಶೇ. 7.39 ಮತ್ತು ನಿವ್ವಳ ಎನ್‌ಪಿಎ ಶೇ. 4.35 ಆಗಿತ್ತು. ಖಂಡಿತವಾಗಿಯೂ ಈ ಅಂಶಗಳು ಎಚ್ಚರಿಕೆಯ ಗಂಟೆಯಂತೂ ಆಗಿರಲಿಲ್ಲ. ಆದರೆ ನಿಯಂತ್ರಕಗಳ ಅಗತ್ಯತೆ ವಿಚಾರದಲ್ಲಿ ಇದು ತುಂಬಾ ಸುಧಾರಣೆ ಕಂಡುಕೊಳ್ಳಬಹುದಿತ್ತು.
ಆದರೆ ಕೆಲವು ಇತರ ಆಂತರಿಕ ಸಂಗತಿಗಳು ಆತಂಕಕಾರಿಯಾಗಿದ್ದವು. ಇದರಿಂದಾಗಿ ಬ್ಯಾಂಕ್‌ನ ಸ್ಥಿತಿ ಇನ್ನಷ್ಟು ಆಘಾತಕಾರಿಯಾಯಿತು ಮತ್ತು ಬ್ಯಾಂಕ್ ಅನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದವು. 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಲ್ಲಿ 1000 ಕ್ಕೂ ಹೆಚ್ಚು ಶಾಖೆಗಳು ಮತ್ತು 1800 ಎಟಿಎಂಗಳನ್ನು ಹೊಂದಿರುವ ಯೆಸ್ ಬ್ಯಾಂಕ್ 2.27 ಲಕ್ಷ ಕೋಟಿ ರೂ. ಡೆಪಾಸಿಟ್ ಹೊಂದಿದೆ ಮತ್ತು ಮಾರ್ಚ್ 2019 ರ ವೇಳೆ 2.64 ಲಕ್ಷ ಕೋಟಿ ಸಾಲಗಳನ್ನು ಹೊಂದಿದ್ದು, ಕೋಟ್ಯಂತರ ಎಂಡ್/ಹೈ ನೆಟ್ ವರ್ತ್ ವ್ಯಕ್ತಿಗಳಿಗೆ (ಎಚ್‌ಎನ್‌ಐ) ಸೇವೆ ಒದಗಿಸುತ್ತಿದೆ.
2019 ಸೆಪ್ಟೆಂಬರ್ ವೇಳೆಗೆ ಠೇವಣಿಯು 2.09 ಲಕ್ಷ ಕೋಟಿಗೆ ಇಳಿಕೆಯಾಯಿತು. ಇದು ದ್ರವ್ಯತೆಯ ಮೇಲೆ ಒತ್ತಡ ಉಂಟು ಮಾಡಿತು ಮತ್ತು ಈ ಟ್ರೆಂಡ್ ಹೆಚ್ಚುತ್ತಲೇ ಇತ್ತು. ಮೇಲ್ನೋಟಕ್ಕೆ ಉತ್ತಮವಾಗಿರುವ ಬ್ಯಾಂಕ್ ಒಂದು ತಾನೇ ಆಘಾತವನ್ನು ಆಹ್ವಾನಿಸಿಕೊಂಡಂತಿತ್ತು. ಈ ಕುಸಿತ ಎಷ್ಟು ಆಳ ಮತ್ತು ತ್ವರಿತವಾಗಿತ್ತು ಎಂದರೆ, ಇದನ್ನು ತಡೆಯಲು ಆರ್‌ಬಿಐಗೆ ಕೂಡ ಸೂಕ್ತ ಸರಿಪಡಿಸುವಿಕೆ ಕ್ರಮ(ಪಿಸಿಎ) ಅನ್ನು ವಿಧಿಸಲು ಸಾಧ್ಯವಾಗಲಿಲ್ಲ.
ಸಾಮಾನ್ಯವಾಗಿ ನಾಲ್ಕು ಸನ್ನಿವೇಶಗಳು ಪೂರಕವಾಗಿದ್ದಲ್ಲಿ ಪಿಸಿಎ ಅನ್ನು ಆರ್‌ಬಿಐ ವಿಧಿಸುತ್ತದೆ. ಅಂದರೆ, ಶೇ.10.875 ಕ್ಕಿಂತ ಬಂಡವಾಳ ಕಡಿಮೆ ಇದ್ದರೆ, ನಿವ್ವಳ ಎನ್‌ಪಿಎ ಶೇ. 6 ಕ್ಕಿಂತ ಹೆಚ್ಚು ಇದ್ದರೆ, ಸತತ ಎರಡು ತ್ರೈಮಾಸಿಕದಲ್ಲಿ ಅಸೆಟ್‌ಗಳ ಮೇಲೆ ನೆಗೆಟಿವ್ ರಿಟರ್ನ್ಸ್ ಮತ್ತು ಶೇ. 4.5 ಕ್ಕಿಂತ ಹೆಚ್ಚು ಅಧಿಕ ಲೆವರೇಜ್ ಅನುಪಾತವಿದ್ದರೆ ಪಿಸಿಎ ಅನ್ನು ಆರ್‌ಬಿಐ ವಿಧಿಸುತ್ತದೆ. ಸದ್ಯದ ಮಟ್ಟಿಗೆ ನಾಲ್ಕು ಬ್ಯಾಂಕ್‌ಗಳಾದ ಯುನೈಟೆಡ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಐಒಬಿ, ಯುಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗಳು ಪಿಸಿಎಗೆ ಒಳಪಟ್ಟಿವೆ.
ಕುಸಿತದ ಚಿಹ್ನೆಗಳು:
ಯಾವುದೇ ಹೂಡಿಕೆದಾರರೂ ಬಂಡವಾಳವನ್ನು ಹೆಚ್ಚಿಸಲು ಮುಂದೆ ಬಂದಿಲ್ಲ. ಇನ್ನೊಂದೆಡೆ ಮಾರ್ಚ್ 2019 ರಿಂದ 3277 ಕೋಟಿ ರೂ. ಮೊತ್ತದ ಎನ್‌ಪಿಎ ಅನ್ನು ಬ್ಯಾಂಕ್ ವರದಿ ಮಾಡದೇ ಮುಚ್ಚಿಟ್ಟಿತ್ತು. ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಅವರ ಅವಧಿಯನ್ನು ವಿಸ್ತರಿಸಲು ಆರ್‌ಬಿಐ ನಿರಾಕರಿಸಿತ್ತು ಮತ್ತು ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ 2019 ಸೆಪ್ಟೆಂಬರ್ ನಲ್ಲಿ 55.2 ಮಿಲಿಯನ್ ಷೇರುಗಳನ್ನು ಇವರು ಮಾರಾಟ ಮಾಡಿದ್ದರು.
ಇದೆಲ್ಲದ ನಂತರ 2019 ಡಿಸೆಂಬರ್‌ನಲ್ಲಿ ಅಸೆಟ್‌ಗಳ ಮೇಲಿನ ಹೆಚ್ಚಿದ ಒತ್ತಡ ಮತ್ತು ತಾಳಿಕೊಳ್ಳುವ ಶಕ್ತಿ ಕಡಿಮೆ ಇದೆ ಎಂಬ ಕಾರಣಕ್ಕೆ ಬ್ಯಾಂಕ್‌ನ ಕ್ರೆಡಿಟ್ ರೇಟಿಂಗ್ ಅನ್ನು ಮೂಡೀಸ್ ಇನ್ವೆಸ್ಟರ್ ಸರ್ವೀಸ್ ಇಳಿಕೆ ಮಾಡಿತ್ತು. ಇದು ಬ್ಯಾಂಕ್ ಅನ್ನು ದಿವಾಳಿಯ ಕಡೆಗೆ ಇನ್ನಷ್ಟು ಕೊಂಡೊಯ್ದಿತು. ಕ್ಷೀಣಗೊಂಡ ಕಾರ್ಪೊರೇಟ್ ಆಡಳಿತ ವಿಧಾನಗಳು, ಕುಸಿದ ನಿಯಂತ್ರಣಗಳು ಮತ್ತು ಮಂಡಳಿ ಹೊಂದಿರುವ ಸ್ವಾತಂತ್ರ್ಯ ಮತ್ತು ಬ್ಯಾಲೆನ್ಸ್ ಶೀಟ್ ಅನ್ನು ನಿಯಂತ್ರಿಸಿದ ಆಡಳಿತ ಮಂಡಳಿಯ ಕ್ರಮಗಳು ಇಡೀ ಸ್ವತ್ತನ್ನು ಆಪತ್ತಿಗೆ ಒಡ್ಡಿತು. ಇದರಿಂದಾಗಿ ಭಾರಿ ಪ್ರಮಾಣದ ಕಾರ್ಯನಿರ್ವಹಣೆ ರಿಸ್ಕ್ ಮತ್ತು ಅಸಮರ್ಪಕ ಸಿಸ್ಟಮಿಕ್ ಕಂಟ್ರೋಲ್‌ಗಳು ಈ ಸಮಸ್ಯೆಯನ್ನು ಉಂಟು ಮಾಡಿದವು.
ಪಟ್ಟಭದ್ರ ಹಿತಾಸಕ್ತಿಗಳಿಗೆ ಪೂರಕವಾಗಿ ಆಡಳಿತ ಮಂಡಳಿಯ ಕೆಲಸ ಮಾಡಿದಾಗ ಇಡೀ ಆಡಿಟ್ ವ್ಯವಸ್ಥೆಯೇ ಅಡಿಮೇಲಾಗಿ ಕೆಲಸ ಮಾಡಿತು. ಹೊಸ ತಲೆಮಾರಿನ ಖಾಸಗಿ ಬ್ಯಾಂಕ್‌ಗಳ ದಕ್ಷತೆಯನ್ನು ಮಾದರಿಯೆಂಬಂತೆ ನೋಡಲಾಗುತ್ತಿದ್ದ ಸಮಯದಲ್ಲಿ, ಈ ಸಮಸ್ಯೆ ಈಗ ಇಡೀ ವಲಯಕ್ಕೇ ಕಪ್ಪು ಚುಕ್ಕೆಯಾಗಿದೆ.
ಮುಂದಿನ ಕ್ರಮ:
ಯೆಸ್ ಬ್ಯಾಂಕ್‌ನ ಮಂಡಳಿಯನ್ನು ಅಮಾನತು ಮಾಡಿ ಹೊಸ ಆಡಳಿತ ಮಂಡಳಿಯನ್ನು ಎಸ್‌ಬಿಐ ಸಹಭಾಗಿತ್ವದಲ್ಲಿ ರೂಪಿಸಲಾಗಿದೆ. ಎಸ್‌ಬಿಐ 5 ಸಾವಿರ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಲಿದ್ದು, 2020 ಮರುರಚನೆ ಸ್ಕೀಮ್ ಅನ್ನು ಇನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬಹುದಾಗಿದೆ.
ತಮ್ಮ ಹೂಡಿಕೆಯನ್ನು ರಕ್ಷಿಸಲಾಗುತ್ತದೆ ಎಂಬ ನಿರೀಕ್ಷೆ ಹೂಡಿಕೆದಾರರ ವಲಯದಲ್ಲಿ ಕೇಳಿಬರುತ್ತಿದೆ. ಹೂಡಿಕೆದಾರರ ಸಂಕಷ್ಟದ ಪರಿಸ್ಥಿತಿಯು 2020 ಏಪ್ರಿಲ್ 4 ಕ್ಕೆ ಕೊನೆಯಾಗಲಿದೆ. ಬ್ಯಾಂಕ್ ಅನ್ನು ಸರಿದಾರಿಗೆ ತರುವ ಕ್ರಮಗಳನ್ನು ಮೊದಲೇ ಕೈಗೊಂಡಿದ್ದರೆ ಈ ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದು ಸದ್ಯದ ಅಗತ್ಯವಾಗಿದೆ. ಈಗ ಸರ್ಕಾರ ಮತ್ತು ಆರ್‌ಬಿಐ ತಮ್ಮ ನಿಯಂತ್ರಣ ಹೊಂದಿವೆ. ಈಗ ಮರುರಚನೆಯ ಸ್ಕೀಮ್ ಅನ್ನು ಎಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂಬುದು ಸರ್ಕಾರ ಮತ್ತು ಆರ್‌ಬಿಐ ಅನ್ನು ಆಧರಿಸಿದೆ. ಇದರಿಂದ ಗ್ರಾಹಕರ ಸಂಕಷ್ಟ ಕೊನೆಯಾಗಬೇಕಾಗಿದೆ. ಹಣಕಾಸು ವಲಯದಲ್ಲಿ ದೇಶೀಯ ಮತ್ತು ಸಾಗರೋತ್ತರ ಹೂಡಿಕೆದಾರರ ವಿಶ್ವಾಸವನ್ನು ಪುನಃ ಗಳಿಸುವುದು ಅತ್ಯಂತ ಪ್ರಮುಖವಾಗಿದೆ. ಅದರಲ್ಲೂ ಈಗ ಆರ್ಥಿಕತೆಯು ಕುಸಿತ ಕಾಣುತ್ತಿದೆ ಮತ್ತು ಗ್ರಾಹಕರು ಈ ಆರ್ಥಿಕ ಕುಸಿತ ಮುನ್ಸೂಚನೆಗಳನ್ನು ಗ್ರಹಿಸಿ ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲದ ಈ ಸನ್ನಿವೇಶದಲ್ಲಿ ಈ ಕ್ರಮಗಳು ಅತ್ಯಂತ ಪ್ರಮುಖ ಪಾತ್ರ ಹೊಂದಿರುತ್ತವೆ.