ಚೆನ್ನೈ (ತಮಿಳುನಾಡು): ಲಾಡ್ಜ್ವೊಂದರ ಮೇಲೆ ದಾಳಿ ಮಾಡಿ ಸೆಕ್ಸ್ ಜಾಲ ಭೇದಿಸಿದ ಕೊಯಮತ್ತೂರಿನ ಪೊಲೀಸರು ಲಾಡ್ಜ್ನಲ್ಲಿದ್ದ 'ರಹಸ್ಯ ಕೋಣೆ'ಯನ್ನು ನೋಡಿ ದಂಗಾಗಿದ್ದಾರೆ.
ಲೈಂಗಿಕ ದಂಧೆ ನಡೆಸಲಾಗುತ್ತಿದೆ ಎಂಬ ಅನುಮಾನದ ಹಿನ್ನೆಲೆ ಮೆಟ್ಟುಪಾಳಯಂ ಬಳಿ ಇರುವ ಶರಣ್ಯ ಎಂಬ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು 'ರಹಸ್ಯ ಕೋಣೆ'ಯಲ್ಲಿ ಅಡಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಅಲ್ಲದೇ ಕನ್ನಡಿ ಹಿಂದೆ ಇದ್ದ 'ರಹಸ್ಯ ಕೋಣೆ' ಕಂಡು ಆಶ್ಚರ್ಯಚಕಿತರಾಗಿದ್ದಾರೆ. ರಕ್ಷಣೆ ಮಾಡಿರುವ 22 ವರ್ಷದ ಯುವತಿಯು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ.
ದಾಳಿ ವೇಳೆ ಪೊಲೀಸರು 'ರಹಸ್ಯ ಕೋಣೆ'ಯನ್ನು ಪತ್ತೆ ಮಾಡಿದ್ದಾರೆ. ಕೋಣೆಯಲ್ಲಿ ಯುವತಿಯೊಬ್ಬಳನ್ನು ಕೂಡಿ ಹಾಕಲಾಗಿತ್ತು. ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೊದಲು ನಾವು ಎಲ್ಲ ಕೊಠಡಿಗಳನ್ನು ಹುಡುಕಿದೆವು. ಅವು ಖಾಲಿಯಾಗಿರುವುದು ಕಂಡುಬಂದಿತು. ಆದರೆ, ಒಂದೇ ಕೋಣೆಯಲ್ಲಿ ಎರಡು ಕನ್ನಡಿಗಳು ವಿರುದ್ಧ ದಿಕ್ಕಿನಲ್ಲಿದ್ದವು. ಅನುಮಾನದಿಂದ ನೋಡಿದಾಗ ಒಂದು ಕನ್ನಡಿಯ ಹಿಂದೆ 'ರಹಸ್ಯ ಕೋಣೆ' ಇರುವುದು ಪತ್ತೆಯಾಯಿತು. ಸ್ನಾನ ಗೃಹವನ್ನೇ ರಹಸ್ಯ ಕೋಣೆಯನ್ನಾಗಿ ಪರಿವರ್ತಿಸಿದ್ದಾರೆ. ಚಿಕ್ಕದಾದ ಸ್ಟೂಲ್ನ ಸಹಾಯದಿಂದ ಒಬ್ಬರು ಕೋಣೆಯ ಒಳಗೆ ಹೋಗಬಹುದು ಮತ್ತು ಹೊರಗೆ ಬರಬಹುದು. ಅಂತಹ 'ರಹಸ್ಯ ಕೋಣೆ'ಯಲ್ಲಿ ದಂಧೆ ನಡೆಸುತ್ತಿದ್ದರು ಎಂಬ ಅನುಮಾನವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.