ತಿರುಪತಿ (ಆಂಧ್ರಪ್ರದೇಶ): ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಶಂಕು ಸ್ಥಾಪನೆ ನೆರವೇರಿಸಿದರು.
ಬೆಳಗ್ಗೆ 8:30ಕ್ಕೆ ಬಿ.ಎಸ್.ಯಡಿಯೂರಪ್ಪ ಮತ್ತು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಕರ್ನಾಟಕ ಭವನ ನಿರ್ಮಾಣ ಭೂಮಿ ಪೂಜೆ ನೆರವೇರಿಸಿದರು. 7.5 ಎಕರೆ ಪ್ರದೇಶದಲ್ಲಿ ಈ ವಸತಿ ಗೃಹ ನಿರ್ಮಾಣವಾಗಲಿದ್ದು, ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು, ಈ ಭವನ ನಿರ್ಮಾಣ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
3 ಲಕ್ಷ ಚದರ ಅಡಿ ಜಾಗದಲ್ಲಿ ಸಂಪಿಗೆ, ಸೇವಂತಿಗೆ, ತಾವರೆ ಮತ್ತು ಮಲ್ಲಿಗೆ ಹೆಸರಿನ ನಾಲ್ಕು ಭವ್ಯ ಕಟ್ಟಡಗಳು ತಲೆ ಎತ್ತಲಿವೆ. ಈ ನಾಲ್ಕು ಹೊಸ ಕಟ್ಟಡ ನಿರ್ಮಾಣ ಹೊಣೆಯನ್ನು ಟಿಟಿಡಿ ವಹಿಸಿಕೊಂಡಿದೆ. ಈ ಹಿಂದೆ ಇದ್ದ ಕನಕಾಂಬರ ಎಂಬ ಹೆಸರಿನ ಕಟ್ಟಡವನ್ನು ನವೀಕರಣ ಮಾಡಲಾಗುತ್ತದೆ. ಈ ಹಿಂದೆ ಅಂದರೆ 1964ರಲ್ಲಿ ನ್ಯೂ ಮೈಸೂರು ಚೌಲ್ಟ್ರಿಗೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು.
ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ತೆರಳುತ್ತಾರೆ. ಆದರೆ ಎಲ್ಲರಿಗೂ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ಕೊಠಡಿಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಲ್ಲೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದು, ನೂತನ ಭವನ ನಿರ್ಮಾಣವಾದರೆ ಪ್ರತೀ ದಿನ 1,800 ಭಕ್ತರು ಉಳಿದುಕೊಳ್ಳಬಹುದು.
ಕಾರ್ಯಕ್ರಮದಲ್ಲಿ ಎರಡೂ ರಾಜ್ಯಗಳ ಮುಂಖ್ಯಮಂತ್ರಿಗಳಲ್ಲದೆ ಟಿಟಿಡಿ ಚೇರ್ಮನ್ ಸುಬ್ಬಾ ರೆಡ್ಡಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಗಣ್ಯರು ಹಾಜರಿದ್ದರು. ಶಿಲಾನ್ಯಾಸ ಕಾರ್ಯಕ್ರಮಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಹಾಗೂ ಆಂಧ್ರಪ್ರದೇಶ ಸಿಎಂ ಜಗನಮೋಹನ್ ರೆಡ್ಡಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.