ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಪಕ್ಷದ ಶಾಸಕರೊಂದಿಗೆ ಇಂದು ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಸ್ಮಾರಕಕ್ಕೆ ಭೇಟಿ ನೀಡಿದರು. ಏಳು ಜೀವಗಳನ್ನು ಬಲಿ ಪಡೆದ ಈಶಾನ್ಯ ದೆಹಲಿಯ ಹಿಂಸಾಚಾರದ ಕುರಿತು ಮಾತನಾಡಿದ ಅವರು, ಹಿಂಸಾಚಾರದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕೆಂದು ಕರೆ ನೀಡಿದರು.
"ಆರು ನಾಗರಿಕರು ಹಾಗೂ ಓರ್ವ ಪೊಲೀಸ್ ಪೇದೆ ಹಿಂಸಾಚಾರದಿಂದ ಮೃತಪಟ್ಟಿದ್ದಾರೆ. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಮಹಾತ್ಮ ಗಾಂಧೀಜಿ ಅಹಿಂಸೆಯ ಆರಾಧಕರಾಗಿದ್ದರು. ದೆಹಲಿಯಲ್ಲಿ ಶಾಂತಿ ಸ್ಥಾಪನೆಗಾಗಿ ನಾವೆಲ್ಲರೂ ಪ್ರಾರ್ಥಿಸಿದ್ದೇವೆ" ಎಂದು ರಾಜ್ಘಾಟ್ ಭೇಟಿಯ ವೇಳೆ ಕೇಜ್ರಿವಾಲ್ ಹೇಳಿಕೆ ನೀಡಿದರು.
ಬಳಿಕ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕೇಜ್ರಿವಾಲ್ ಭೇಟಿಯಾದರು. ಮೃತ ಹೆಡ್ ಕಾನ್ಸ್‌ಟೇಬಲ್ ರತನ್ ಲಾಲ್ ಅವರ ಕುಟುಂಬವನ್ನೂ ಸಿಎಂ ಭೇಟಿಯಾಗುವ ನಿರೀಕ್ಷೆಯಿದೆ.