ಹೈದರಾಬಾದ್: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ದೇಶಾದ್ಯಂತ 21 ದಿನ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಈ ನಡುವೆ, ಕೊರೊನಾ ಭೀಕರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಕೊರೊನಾ ಹಾವಳಿ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಇದೇ ವೇಳೆ ಮಾತು ಮುಂದುವರಿಸಿದ ಅವರು, ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೂ ಜನ ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಹೀಗೆ ಆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರಲ್ಲದೇ, ಅಮೆರಿಕ ಹಾಗೂ ಇನ್ನಿತರ ರಾಷ್ಟ್ರಗಳ ಉದಾಹರಣೆ ನೀಡಿದ ಅವರು, ಮೊದಲು ಜನರಿಗೆ ತಿಳಿಹೇಳಬೇಕಾಗುತ್ತದೆ. ಅದಕ್ಕೂ ಬಗ್ಗದಿದ್ದಾಗ ಅನಿವಾರ್ಯವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಕಂಡಲ್ಲಿ ಗುಂಡು ಹಾರಿಸಲು ಆದೇಶವನ್ನೂ ನೀಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.
ಕೆಸಿಆರ್ ಈ ಮಾತು ಈಗ ತೆಲಂಗಾಣ ಜನರನ್ನ ಆತಂಕಕ್ಕೆ ದೂಡಿದೆ. ಅಷ್ಟೇ ಅಲ್ಲ ಸಿಎಂ ಮಾತು ಸಂಚಲನವನ್ನೂ ಸೃಷ್ಟಿಸಿದೆ. ಇನ್ನು ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆವರೆಗೆ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ. ಹಾಗಾಗಿ ಜನ ಮನೆ ಬಿಟ್ಟು ಹೊರಬರಬಾರದು. ಬಂದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು. ಇದನ್ನೂ ಮೀರಿದಾಗ ಸೇನೆಯನ್ನ ಕರೆಸಬೇಕಾದ ಪರಿಸ್ಥಿತಿ ಬರಬಹುದು ಎಂಬ ಸುಳಿವನ್ನೂ ನೀಡಿದರು. ಇಂತಹ ಕ್ರಮ ಕೈಗೊಳ್ಳಲು ಅವಕಾಶ ನೀಡದಂತೆಯೂ ಅವರು ಜನರಲ್ಲಿ ಮನವಿ ಮಾಡಿದರು.