ತೆಲಂಗಾಣ: ಪ್ರಧಾನಿ ಮೋದಿ ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ದೇಶದಲ್ಲಿ ಜನತಾ ಕರ್ಫ್ಯೂ ಘೋಷಿಸಿದ್ದರೆ, ಈ ಅವಧಿಯನ್ನು ರಾಜ್ಯದಲ್ಲಿ 24 ಗಂಟೆಗಳಿಗೆ ಹೆಚ್ಚಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ವಿದೇಶದಿಂದ ಬಂದ ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳುವಂತೆ ಆದೇಶಿಸಿದ್ದಾರೆ.
ತೆಲಂಗಾಣದಲ್ಲಿ ಭಾನುವಾರ ಬೆಳಗ್ಗೆ 6 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೂ ಜನತಾ ಕರ್ಫ್ಯೂ ಮುಂದುವರೆಯಲಿದೆ. ಪ್ರತಿಯೊಬ್ಬರೂ ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯೊಳಗೆ ಇರಬೇಕು. ಎಲ್ಲ ಟಿಎಸ್‌ಆರ್‌ಟಿಸಿ ಸೇವೆಗಳನ್ನು ಹಾಗೂ ಇತರ ರಾಜ್ಯಗಳಿಂದ ಬರುವ ಬಸ್‌ಗಳನ್ನು 24 ಗಂಟೆಗಳವರೆಗೆ ಸ್ಥಗಿತಗೊಳಿಸುವಂತೆ ಆರ್‌ಟಿಸಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಕರ್ಫ್ಯೂಗೆ ಬೆಂಬಲಿಸಬೇಕು ಎಂದು ಸಿಎಂ ಕೆಸಿಆರ್ ತಿಳಿಸಿದ್ದಾರೆ.
ವಿದೇಶದಿಂದ ಬಂದ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರುವಂತಿಲ್ಲ. ಇವರುಗಳು ರಸ್ತೆಗೆ ಬಂದರೆ ಅದು ಜನಸಮುದಾಯಕ್ಕೆ ಭಾರಿ ಅಪಾಯ ತಂದಿಡಲಿದೆ. ವಿದೇಶದಿಂದ ಬಂದವರಿಗೆ ಜ್ಚರ, ಶೀತ, ಕೆಮ್ಮು ಇದ್ದರೆ ತಕ್ಷಣವೇ ಅಂತವರು ವೈದ್ಯರನ್ನು ಸಂಪರ್ಕಿಸಬೇಕೆಂದು ಕೆಸಿಆರ್ ಸೂಚಿಸಿದ್ದಾರೆ.
ಇಂದು ಮತ್ತಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತೆಲಂಗಾಣದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದ ರಾಜ್ಯದ ಗಡಿಭಾಗಗಳ ಸಂಪರ್ಕವನ್ನು ಬಂದ್ ಮಾಡಲು ಚಿಂತನೆ ನಡೆಸಿರುವುದಾಗಿ ಕೂಡ ಚಂದ್ರಶೇಖರ್ ರಾವ್ ಹೇಳಿದ್ದಾರೆ.