ನವದೆಹಲಿ: ಲಾಕ್ಡೌನ್ ಆರಂಭವಾದಾಗಿನಿಂದ ಜನರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ ಶಂಕಿತ ಎಂಟು ತಿಂಗಳ ತುಂಬು ಗರ್ಭಿಣಿಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಆಜಾದ್ನಗರ ನಿವಾಸಿಯಾದ ಉಜ್ಮಾ ಎಂಬ ಎಂಟು ತಿಂಗಳ ತುಂಬು ಗರ್ಭಿಣಿ, ಕೆಲವು ದಿನಗಳಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದರು. ಈ ಸಂಬಂಧ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದಿದ್ದರು. ಆದರೆ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿರಲಿಲ್ಲ. ಮತ್ತೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಗ ಶಂಕಿತ ಕೊರೊನಾ ಎಂದು ಭಾವಿಸಿ ವೈದ್ಯರು ಈಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿ ಮನೆಗೆ ಕಳುಹಿಸಿದ್ದರು ಎನ್ನಲಾಗ್ತಿದೆ.
ದಿನ ಕಳೆದಂತೆ ಮಹಿಳೆಯ ಆರೋಗ್ಯ ಬಿಗಡಾಯಿಸುತ್ತಾ ಹೋಯಿತು. ಎಲ್ಲಿ ಗರ್ಭದಲ್ಲಿರುವ ಮಗುವನ್ನು ಕಳೆದುಕೊಳ್ಳುತ್ತೇನೋ ಎಂಬ ಭಯದಿಂದ ಈಕೆ, ತಮ್ಮ ಪರಿಸ್ಥಿತಿಯ ಕುರಿತು ವಿಡಿಯೋ ಮಾಡಿ ಸಹಾಯಕ್ಕೆ ಅಂಗಾಲಾಚಿದ್ದರು. ತಾನು ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದೃಷ್ಟ ಎಂಬಂತೆ ಹೇಗೋ ಮಹಿಳೆ ಮಾಡಿದ್ದ ವಿಡಿಯೋ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಲುಪಿದೆ.
ಇನ್ನು ಮಹಿಳೆಯ ಪರಿಸ್ಥಿತಿ ಕಂಡ ಮುಖ್ಯಮಂತ್ರಿ ಅವರು, ಸ್ಥಳೀಯ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಮಹಿಳೆಗೆ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.