ಹೈದರಾಬಾದ್: 2016ರಲ್ಲಿ ಎನ್ಕೌಂಟರ್ಗೆ ಬಲಿಯಾಗಿದ್ದ ದರೋಡೆಕೋರ ಮೊಹಮ್ಮದ್ ನಯೀಮುದ್ದೀನ್ ಅಲಿಯಾಸ್ ನಯೀಮ್ ಅವರ ಅಕ್ರಮ ಚಟುವಟಿಕೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ 25 ಮಂದಿ ಪೊಲೀಸ್ ಸಿಬ್ಬಂದಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ನಯೀಮ್ ಮತ್ತು ಅವರ ಸಹಚರರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಏಳು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 13 ಇನ್ಸ್‌ಪೆಕ್ಟರ್‌ಗಳು, ಇಬ್ಬರು ಹೆಡ್ ಕಾನ್ಸ್ಬಲ್ಗಳು ಮತ್ತು ಓರ್ವ ಕಾನ್ಸ್ಟೆಬಲ್ ಹೆಸರುಗಳು ಕೇಳಿಬಂದಿದ್ದವು.
ನಯೀಮ್ ಅವರ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 173 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರ್‌ಟಿಐನಡಿ ಪದ್ಮನಾಭ್ ರೆಡ್ಡಿ ಎಂಬುವರು ಸಲ್ಲಿಸಿದ ಅರ್ಜಿಗೆ ಎಸ್‌ಐಟಿ ಮುಖ್ಯಸ್ಥ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವೈ ನಾಗಿ ರೆಡ್ಡಿ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಕರಣಗಳು ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ. 173 ಪ್ರಕರಣಗಳಲ್ಲಿ ಎಂಟು ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿ, ಅವರಲ್ಲಿ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಎಸ್ಐಟಿ ಮುಖ್ಯಸ್ಥರು ಹೇಳಿದ್ದಾರೆ.
ಮಾಹಿತಿಯ ನಂತರ, ಫೋರಂ ಫಾರ್ ಗುಡ್ ಗವರ್ನನ್ಸ್ ಕಾರ್ಯದರ್ಶಿ ಎಂ ಪದ್ಮನಾಭ ರೆಡ್ಡಿ ಅವರು ನಯೀಮ್ ಅವರೊಂದಿಗೆ ಸಂಪರ್ಕ ಹೊಂದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಎಸ್‌ಐಟಿ ಪ್ರಾರಂಭದಿಂದಲೇ 'ಕಳಪೆ ಮತ್ತು ಅನುಮಾನಾಸ್ಪದ' ಕೆಲಸವನ್ನು ಮಾಡುತ್ತಿದೆ ಎಂದು ಆರ್ಟಿಐ ಕಾರ್ಯಕರ್ತ ಆರೋಪಿಸಿದ್ದಾರೆ. "ನಯೀಮ್ ವಿರುದ್ಧ ಸುಮಾರು 240 ಪ್ರಕರಣಗಳು ದಾಖಲಾಗಿವೆ. ಆದ್ರೆ 173 ಪ್ರಕರಣಗಳಿಗೆ ಮಾತ್ರ ಚಾರ್ಜ್‌ಶೀಟ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ನಾಲ್ಕು ವರ್ಷಗಳ ನಂತರವೂ ಒಂದೇ ಒಂದು ಪ್ರಕರಣ ತಾರ್ಕಿಕ ತೀರ್ಮಾನಕ್ಕೆ ಬಂದಿಲ್ಲ" ಎಂದು ಪದ್ಮನಾಭ ರೆಡ್ಡಿ ಹೇಳಿದ್ದಾರೆ.
"ಇದು ಪೊಲೀಸರು, ರಾಜಕಾರಣಿಗಳು ಮತ್ತು ದರೋಡೆಕೋರರು ಒಟ್ಟಾಗಿ ಬಂದು ಮುಗ್ಧ ಜನರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣವಾಗಿದೆ," ಎಂದು ಅವರು ದೂರಿದ್ದಾರೆ.
ಈ ಹಿಂದೆ ಪೊಲೀಸ್ ಅಧಿಕಾರಿಗಳು ದರೋಡೆಕೋರರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ತನಿಖಾಧಿಕಾರಿಗಳು ವಶಪಡಿಸಿಕೊಂಡ ನಯೀಮ್ ಅವರ ನಿವಾಸದಲ್ಲಿನ ಡೈರಿಯೊಂದರಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೊಂದಿಗೆ ನಯೀಮ್ ಸಂಪರ್ಕದಲ್ಲಿದ್ದರು ಎಂಬುದು ಉಲ್ಲೇಖವಾಗಿರುವ ಮಾಹಿತಿ ಇದೆ ಎನ್ನಲಾಗ್ತಿದೆ.