ನವದೆಹಲಿ: ಸಾಕಷ್ಟು ಟೀಕೆ, ವಿವಾದಗಳಿಗೆ ಗ್ರಾಸವಾಗಿರುವ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ಆರ್ಸಿ) ಯೋಜನೆಯನ್ನು ಸಿಜೆಐ ರಂಜನ್ ಗೊಗೋಯ್ ಸಮರ್ಥಿಸಿದ್ದಾರೆ. ಅಸ್ಸೋಂನಲ್ಲಿ ಜಾರಿಯಾಗಿರುವ ಎನ್ಆರ್ಸಿ ಭವಿಷ್ಯದಲ್ಲಿ ಒಂದು ಮೂಲ ದಾಖಲೆಯಾಗಲಿದೆ. ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸಮಸ್ಯೆಗೆ ಎನ್ಆರ್ಸಿ ಪರಿಹಾರ ಒದಗಿಸುತ್ತದೆ ಎಂದು ಹೇಳಿದ್ದಾರೆ.
ವರ್ತಮಾನದಲ್ಲಿ ಎನ್ಆರ್ಸಿ ಉಪಯುಕ್ತವೆನಿಸದೆ ಇರಬಹುದು. ಪೌರತ್ವ ಪಟ್ಟಿಯಿಂದ 19 ಲಕ್ಷ ಅಥವಾ 40 ಲಕ್ಷ ಜನ ಹೊರಗಿದ್ದಾರೆ ಎಂಬುದು ಮುಖ್ಯವಲ್ಲ. ಆದರೆ, ಎನ್ಆರ್ಸಿ ಭವಿಷ್ಯಕ್ಕಾಗಿ ಒಂದು ಮೂಲ ದಾಖಲೆಯಾಗಿ ಉಳಿಯಲಿದೆ ಎಂಬುದು ಮಾತ್ರ ಸತ್ಯ. ಭವಿಷ್ಯದ ಉಲ್ಲೇಖಕ್ಕೆ ಈ ದಾಖಲೆಯನ್ನು ಉಪಯೋಗಿಸಬಹುದು. ಎನ್ಆರ್ಸಿಯ ಮೂಲ ಆಶಯ ಶಾಂತಿ, ಸಹಬಾಳ್ವೆ ಎಂದು ರಂಜನ್ ಗೊಗೋಯ್ ಹೇಳಿದ್ದಾರೆ.
‘ಪೋಸ್ಟ್ ಕೊಲೋನಿಯಲ್ ಅಸ್ಸಾಂ’ ಎಂಬ ಪುಸ್ತಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಎನ್ಆರ್ಸಿ ವಿಚಾರದ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎನ್ಆರ್ಸಿ ಕುರಿತು ಕಟು ವಿಮರ್ಶೆ ನಡೆಸುತ್ತಿದ್ದಾರೆ. ಎನ್ಆರ್ಸಿ ಯೋಜನೆ ಬಗ್ಗೆ ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎನ್ಆರ್ಸಿ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಪ್ರಥಮ ಬಾರಿಗೆ ಅಸ್ಸೋಂನಲ್ಲಿ ಅನುಷ್ಠಾನಗೊಳಿಸಿದೆ. ಅಸ್ಸೋಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲಸಿದ್ದಾರೆಂಬುದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಆರೋಪವಾಗಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಲೆಂದು ಎನ್ಆರ್ಸಿ ಜಾರಿಗೆ ತರಲಾಯಿತು. ಅವರನ್ನು ಎನ್ಆರ್ಸಿ ಪಟ್ಟಿಗೆ ಸೇರಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಎನ್ಆರ್ಸಿ ಅಂತಿಮ ಪಟ್ಟಿಯಲ್ಲಿ 19 ಲಕ್ಷದಷ್ಟು ಜನರ ಹೆಸರನ್ನು ಕೈಬಿಡಲಾಗಿದೆ. ಸದ್ಯಕ್ಕೆ ಇವರನ್ನು ಶಂಕಿತ ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ. ಅಲ್ಲದೆ ಇವರಿಗೆ ತಮ್ಮ ಭಾರತೀಯ ಪೌರತ್ವ ಸಾಬೀತುಪಡಿಸಲು ಕಾಲಾವಕಾಶ ನೀಡಲಾಗಿದೆ.