ನವದೆಹಲಿ: ತಿಹಾರ್ ಜೈಲಿನಲ್ಲಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಯುರೋಪಿಯನ್ ಫುಡ್ ಬೇಕೆಂದು ಪಟ್ಟು ಹಿಡಿದಿದ್ದು, ಆರೋಪಿಯ ಬೇಡಿಕೆಗಳು ಪೊಲೀಸರಿಗೆ ತಲೆನೋವು ತಂದಿದೆ.
ಕ್ರಿಶ್ಚಿಯನ್ ಮೈಕೆಲ್ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾನೆ. ತನ್ನನ್ನು ಜೈಲಿನಲ್ಲಿ ಕೋತಿ ರೀತಿಯಲ್ಲಿ ಇಡಲಾಗಿದೆ. ಜತೆಗಿರುವ ಸಹ ಕೈದಿಗಳು ತೆರೆದ ಜಾಗದಲ್ಲೇ ಬಹೀರ್ದೆಸೆ ಮಾಡುತ್ತಿದ್ದು ತನಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ದೂರು ನೀಡಿದ್ದಾನೆ.
ಕ್ರಿಶ್ಚಿಯನ್ ಮೈಕೆಲ್ಗೆ ಮೀಸಲಿರಿಡಿರುವ ಜೈಲು ಕೊಠಡಿಯಲ್ಲಿ ಇನ್ನಿಬ್ಬರು ಸಹ ಕೈದಿಗಳಿದ್ದು ಅವರೂ ಸಹ ವಿತ್ತೀಯ ಅಪರಾಧಿಗಳಾಗಿದ್ದಾರೆ. ಸದ್ಯ ಇರುವ ಜೈಲು ಕೊಠಡಿಯು ಕಿರಿದಾಗಿದ್ದು, ಇದಕ್ಕಿಂತ ಮೂರು ಪಟ್ಟು ದೊಡ್ಡದಾದ ಕೊಠಡಿ ಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾನೆ.
ಈ ಹಿಂದಿದ್ದ ಜೈಲು ಕೊಠಡಿಯಿಂದ ಈಗಷ್ಟೆ ಮೈಕೆಲ್ನನ್ನು ಸ್ಥಳಾಂತರಿಸಲಾಗಿದೆ. ತನ್ನ ಜತೆ ಕೊಲೆ ಆರೋಪಿಗಳನ್ನಿಡಲಾಗಿದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಬೇರೆ ಕೊಠಡಿಗೆ ಶಿಫ್ಟ್ ಮಾಡಲಾಗಿತ್ತು.
ಜೈಲೂಟ ಏನು? ತಿಹಾರ್ ಜೈಲಿನಲ್ಲಿ ರಾಜಕೀಯ ಅಪರಾಧಿಗಳು ಹಾಗೂ ವಿವಿಐಪಿ ಆರೋಪಿಗಳಿರುವ ಕಾರಣ ಸ್ವಲ್ಪ ಗುಣಮಟ್ಟದ ಊಟ, ತಿಂಡಿ ಕೊಡಲಾಗುತ್ತದೆ. ಬೆಳಗಿನ ಉಪಹಾರಕ್ಕೆ ಟೀ, ಬಿಸ್ಕತ್, ಬ್ರೆಡ್ ಹಾಗೂ ಹಲ್ವಾ ಕೊಡಲಾಗುತ್ತದೆ.