ಲೇಹ್ (ಲಡಾಖ್): ಪೂರ್ವ ಲಡಾಖ್ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಬಳಿಯ ಗಾಲ್ವಾನ್ ಕಣಿವೆಯಲ್ಲಿ ಬೀಡು ಬಿಟ್ಟಿದ್ದ ಚೀನಿ ಸೇನೆ ಸುಮಾರು 2 ಕಿಲೋಮೀಟರ್ ಹಿಂದಕ್ಕೆ ಸರಿದಿದೆ ಎಂದು ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.
ಚೀನಾ ಮತ್ತು ಭಾರತದ ನಡುವೆ ಸಂಘರ್ಷ ನಡೆದಾಗಿನಿಂದ ಸುಮಾರು ಮೂರು ಹಂತಗಳಲ್ಲಿ ಸೇನಾ ಮಾತುಕತೆಗಳು ನಡೆದಿದೆ. ಈ ವೇಳೆ ಉಭಯ ಸೇನೆಗಳು ಕೆಲವು ಭಾಗಗಳಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದವು. ಆದರೆ ಕಾರ್ಯೋನ್ಮುಖವಾಗಿರಲಿಲ್ಲ.
ಚೀನಾ ಮಾತುಕತೆಗಳ ಮೂಲಕ ಸೇನೆ ಹಿಂತೆಗೆದುಕೊಳ್ಳುವ ಭರವಸೆ ನೀಡುತ್ತಿತ್ತು. ಇನ್ನೊಂದೆಡೆ ಗಡಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡಿಸುವುದು ಮಾತ್ರವಲ್ಲದೇ ಸುಮಾರು 10 ಸಾವಿರ ಸೈನಿಕರನ್ನು ಲಡಾಖ್ ಗಡಿಯಲ್ಲಿ ಜಮಾವಣೆ ಮಾಡಿತ್ತು. ಇದರಿಂದಾಗಿ ಎರಡೂ ರಾಷ್ಟ್ರಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡು ರಾಷ್ಟ್ರಗಳು ಕಮಾಂಡರ್ ಹಂತದ ಮಾತುಕತೆಗಳನ್ನು ನಡೆಸಿದ್ದರೂ ಅದು ಫಲಪ್ರದವಾಗಿರಲಿಲ್ಲ. ಈಗ ಸುಮಾರು 2 ಕಿಲೋಮೀಟರ್ ಹಿಂದೆ ಸರಿದಿರುವುದು ಭಾರತಕ್ಕೆ ಆಶಾದಾಯಕವಾಗಿ ಕಾಣಿಸಿಕೊಂಡಿದೆ.
ಗಾಲ್ವಾನ್ ಪ್ರದೇಶದಿಂದ ಹಿಂದೆ ಸರಿದರೂ ಕೂಡಾ ಈ ಮೊದಲೇ ಬೀಡುಬಿಟ್ಟಿದ್ದ, ಬೃಹತ್ ಶಸ್ತ್ರ ಸಜ್ಜಿತ ವಾಹನಗಳು ಹಾಗೂ ಟೆಂಟ್ಗಳನ್ನು ತೆರವು ಮಾಡಿಲ್ಲ. ಚೀನಾದ ನಡೆಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.