ನವದೆಹಲಿ: ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಭಾರತದೊಳಗೆ ನುಸುಳಲು ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಪೂರ್ವ ಲಡಾಖ್ನಲ್ಲಿ ನಡೆದ ಸಂಘರ್ಷದ ಬಳಿಕ ಗಡಿಯಿಂದ ಎರಡೂ ಸೇನೆಗಳು ಹಿಂದೆ ಸರಿಯುವುದಕ್ಕೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ವೇಳೆ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಗಡಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಸಂಬಂಧ ಈಗಲೂ ಎರಡೂ ದೇಶಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. ಇದರ ನಡುವೆಯೇ ಚೀನಾ ಒಪ್ಪಂದವನ್ನು ಉಲ್ಲಂಘಿಸಿದೆ.
ಆಗಸ್ಟ್ 29 ಮತ್ತು 30ರ ತಡರಾತ್ರಿ ಪಿಎಲ್‌ಎ ಸೈನಿಕರು ಭಾರತದೊಳಗೆ ನುಸುಳಲು ಯತ್ನಿಸಿದ್ದು, ಪಾಂಗೊಂಗ್ ತ್ಸೋ ಸರೋವರದ ಬಳಿ ಭಾರತೀಯ ಪಡೆ ಇವರನ್ನು ತಡೆದಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ಅಮನ್ ಆನಂದ್ ಸ್ಪಷ್ಟನೆ ನೀಡಿದ್ದಾರೆ.