ತನ್ನ ನೆರೆಹೊರೆಯ ಎಲ್ಲ ರಾಷ್ಟ್ರಗಳ ಭೂಬಾಗವನ್ನು ಕಬಳಿಸುವುದು ಚೀನಾ ಸರ್ಕಾರದ ಆಡಳಿತದ ನೀತಿಯೇ ಆಗಿದೆ. ಚೀನಾದ ಭೂದಾಹ ಇಂದು ನಿನ್ನೆಯದಲ್ಲ. ದಶಕಗಳ ಹಿಂದಿನಿಂದಲೂ ಅದು ತನ್ನ ಸುತ್ತಲಿನ ಚಿಕ್ಕ ರಾಷ್ಟ್ರಗಳನ್ನು ಕಬಳಿಸುತ್ತಲೇ ಸಾಮ್ರಾಜ್ಯ ಕಟ್ಟಿಕೊಂಡಿದೆ. ಹೀಗೆ ನೆರೆಯ ದೇಶಗಳ ಭೂಭಾಗ ಆಕ್ರಮಿಸಲು ಚೀನಾ ಅಳವಡಿಸಿಕೊಂಡಿರುವ ತಂತ್ರವೇ ಸಲಾಮಿ ಸ್ಲೈಸಿಂಗ್.
ಸಲಾಮಿ ಸ್ಲೈಸಿಂಗ್ ವಿಧಾನ ಹೇಗಿರುತ್ತದೆ?
ನೆರೆಯ ರಾಷ್ಟ್ರಗಳ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಮೂಲಕ ಚಿಕ್ಕ ಚಿಕ್ಕ ಪ್ರಮಾಣದ ದಾಳಿಗಳನ್ನು ಮಾಡುವುದು. ಆದರೆ ಇಂಥ ದಾಳಿಗಳು ಪೂರ್ಣ ಪ್ರಮಾಣದ ಯುದ್ಧಗಳಾಗದಂತೆ ನೋಡಿಕೊಳ್ಳುತ್ತಿರುವುದು. ಹೀಗಾಗಿ ಇಂಥ ದಾಳಿಗಳಿಗೆ ಯಾವ ರೀತಿಯಲ್ಲಿ ಉತ್ತರ ನೀಡಬೇಕೆಂದು ತಿಳಿಯದಂತೆ ಶತ್ರು ರಾಷ್ಟ್ರವನ್ನು ಕಂಗಾಲು ಮಾಡುವುದು. ಇಂಥವೇ ಕುತಂತ್ರಗಳಿಂದ ಆಗಾಗ ಚಿಕ್ಕ ಚಿಕ್ಕ ಪ್ರದೇಶಗಳನ್ನು ಕಬಳಿಸುತ್ತ ವರ್ಷಾಂತರದಲ್ಲಿ ಬಹುದೊಡ್ಡ ಭೂಪ್ರದೇಶವನ್ನು ತನ್ನೊಳಗೆ ಸೇರಿಸಿಕೊಳ್ಳುವುದು ದುಷ್ಟ ಚೀನಾದ ಸಲಾಮಿ ಸ್ಲೈಸಿಂಗ್ ಕುತಂತ್ರವಾಗಿದೆ.
ಭೂದಾಹಿ ಚೀನಾದ ಕುತಂತ್ರಗಳು!
ಎರಡನೇ ಮಹಾಯುದ್ಧ ಮುಗಿದ ನಂತರ ತನ್ನ ನೆರೆಯ ದೇಶಗಳನ್ನು ಕಬಳಿಸುತ್ತ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿರುವ ವಿಶ್ವದ ಏಕೈಕ ದೇಶ ಚೀನಾ ಆಗಿದೆ. ಭೂಗಡಿ ಹಾಗೂ ಸಮುದ್ರ ಗಡಿ ಹೀಗೆ ಎರಡನ್ನೂ ಚೀನಾ ವಿಸ್ತರಿಸಿಕೊಳ್ಳುತ್ತಿದೆ.
ಟಿಬೆಟ್ ಕಬಳಿಸಿದ್ದು, ಅಕ್ಸಾಯ್ ಚಿನ್ ಆಕ್ರಮಿಸಿದ್ದು ಹಾಗೂ ಪ್ಯಾರಾಸೆಲ ದ್ವೀಪಗಳನ್ನು ತನ್ನೊಳಗೆ ಸೇರಿಸಿಕೊಂಡಿದ್ದು ಚೀನಾದ ಸಾಮ್ರಾಜ್ಯ ವಿಸ್ತರಣಾ ನೀತಿಯ ಜ್ವಲಂತ ಉದಾಹರಣೆಗಳಾಗಿವೆ. ಮೊದಲಿಗೆ ನೆರೆಯ ದೇಶದ ಭೂಭಾಗವೊಂದು ತನ್ನದು ಎಂದು ಹೇಳಲಾರಂಭಿಸುವ ಚೀನಾ ಅದನ್ನು ಪದೇ ಪದೇ ಹೇಳುತ್ತದೆ. ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ತನ್ನದೆಂದು ಹೇಳಿಕೊಳ್ಳುವ ಭೂಭಾಗದ ಕುರಿತಾದ ವಿಷಯವು ನಿಜವಾಗಿಯೂ ವಿವಾದದ ರೂಪ ತಾಳುವಂತೆ ಮಾಡುತ್ತದೆ. ಆಗ ಚೀನಾ ಮತ್ತು ಇನ್ನೊಂದು ರಾಷ್ಟ್ರದ ನಡುವೆ ವಿವಾದ ಇದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಅನಿಸತೊಡಗಿದಾಗ ಚೀನಾ ಮತ್ತೊಂದು ಹೆಜ್ಜೆ ಮುಂದಿಡುತ್ತದೆ.
ಈಗ ನೆರೆಯ ರಾಷ್ಟ್ರದ ಮೇಲೆ ಮಿಲಿಟರಿ ದಾಳಿ ನಡೆಸುತ್ತದೆ ಹಾಗೂ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಮಾರ್ಗದ ಮೂಲಕ ಒತ್ತಡವನ್ನು ಹೇರುವ ಮೂಲಕ ಭೂಮಿಯನ್ನು ಕಬಳಿಸುತ್ತದೆ ಚೀನಾ. ಚೀನಾದ ಈ ಯುದ್ಧತಂತ್ರವನ್ನೇ ಸಲಾಮಿ ಸ್ಲೈಸಿಂಗ್ ಎನ್ನಲಾಗಿದೆ.
ಸಲಾಮಿ ಸ್ಲೈಸಿಂಗ್ ತಂತ್ರವನ್ನು ಚೀನಾ ಅಳವಡಿಸಿಕೊಂಡಿದ್ದು ಯಾವಾಗ?
1948 ರಲ್ಲಿ ಮೇನ್ಲ್ಯಾಂಡ್ ಚೀನಾದಲ್ಲಿ ಆಡಳಿತದಲ್ಲಿದ್ದ ಕೌಮಿಂಟಾಂಗ್ ಸರ್ಕಾರವನ್ನು ಚೀನಾ ಕಮ್ಯೂನಿಸ್ಟ್ ಪಾರ್ಟಿಯು ಉರುಳಿಸಿ ತಾನು ಅಧಿಕಾರಕ್ಕೇರಿತು. ಈ ಸಮಯದಲ್ಲಿ ಟಿಬೆಟ್ ಸ್ವತಂತ್ರ ರಾಷ್ಟ್ರವಾಗಿದ್ದು, ಕೆಲ ಬೌದ್ಧ ಸನ್ಯಾಸಿಗಳ ತಂಡವು ದೇಶವನ್ನಾಳುತ್ತಿತ್ತು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ಟಿಬೆಟ್ ಮೇಲೆ ಮಿಲಿಟರಿ ಆಕ್ರಮಣ ಮಾಡಿ ಇಡೀ ಟಿಬೆಟ್ ಅನ್ನು ವಶಪಡಿಸಿಕೊಂಡಿತು. ಪುರಾತನ ಕಾಲದಲ್ಲಿ ಟಿಬೆಟ್ ತನ್ನ ದೇಶದ ಭಾಗವಾಗಿತ್ತು ಎಂಬುದು ಚೀನಾ ವಾದ. ಇದರ ಜೊತೆಗೆ ಪೂರ್ವ ಲಡಾಖ್ನಲ್ಲಿನ ಜಿಂಜಿಯಾಂಗ್ ಪ್ರಾಂತ್ಯವನ್ನು ಸಹ ಚೀನಾ ಆಕ್ರಮಿಸಿತು. ಈ ಎರಡು ಭೂಪ್ರದೇಶಗಳಿಂದ ಚೀನಾದ ಭೂಪ್ರದೇಶ ದುಪ್ಪಟ್ಟಾಯಿತು.
ಭಾರತದ ಗಡಿಯಲ್ಲಿ ಎಲ್ಲೆಲ್ಲಿ ಚೀನಾ ಕುತಂತ್ರ ನಡೆಸುತ್ತಿದೆ?
- ಭಾರತದ ಅರುಣಾಚಲ ಪ್ರದೇಶದ 90 ಸಾವಿರ ಚದುರ ಕಿಮೀ ಪ್ರದೇಶವು ತನಗೆ ಸೇರಿದ್ದು ಎನ್ನುತ್ತದೆ ಚೀನಾ.
- ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಕೆಲ ಭಾಗಗಳು ಚೀನಾಗೆ ಸೇರಬೇಕಂತೆ.
- ಈಗ ಸಂಪೂರ್ಣ ಗಾಲ್ವನ್ ವ್ಯಾಲಿ ತನ್ನದೆಂದು ಹೇಳುತ್ತಿದೆ ಚೀನಾ.
- ಜಮ್ಮು ಕಾಶ್ಮೀರದ ಉತ್ತರ ಕಾರಾಕೋರಂ ಕಣಿವೆಯ 6 ಸಾವಿರ ಚದುರ ಕಿಮೀ ಪ್ರದೇಶವನ್ನು ಪಾಕಿಸ್ತಾನದಿಂದ ಚೀನಾ ಪಡೆದುಕೊಂಡಿದೆ.