ನ್ಯೂಯಾರ್ಕ್: ರಾಕ್ಷಸಿ ಮನಸ್ಥಿತಿ ಹೊಂದಿರುವ ಚೀನಾ ಗಡಿಯಲ್ಲಿ ಕುಳಿತು ದಾಳಿ ಮಾಡುತ್ತಿದೆ ಎಂದು ಚೀನಾ ವಿರುದ್ಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಟೀಕಿಸಿದ್ದಾರೆ.
ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಹಿಂಸಾತ್ಮಕ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸುತ್ತಾ, ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಭಾರತದೊಂದಿಗಿನ ಗಡಿ ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಹೆಚ್ಚಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶ ದಕ್ಷಿಣ ಚೀನಾದಲ್ಲಿ ಸೇನೆಯನ್ನು ಹೆಚ್ಚಿಸಿಕೊಂಡು ಕಾನೂನು ಬಾಹಿರವಾಗಿ ಹೆಚ್ಚು ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿದೆ. ಸಮುದ್ರ ಗಡಿಯಲ್ಲೂ ಬೆದರಿಕೆ ಹಾಕುತ್ತಿದೆ ಎಂದು ದೂರಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಕ್ಷ ತನ್ನದೇ ದೇಶದ ಮುಸಲ್ಮಾನರ ವಿರುದ್ಧ ದಾಳಿಗಳನ್ನು ಮಾಡಿಸುತ್ತಿದ್ದಾರೆ. ಇದಕ್ಕೆ ಜಿನ್‌ಪಿಂಗ್ ಅವರ ಪ್ರಧಾನ ಕಾರ್ಯದರ್ಶಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. 2ನೇ ಮಹಾಯುದ್ಧದ ಬಳಿಕ ಇಂತಹ ಸನ್ನಿವೇಶವನ್ನು ನಾವು ಎಂದೂ ನೋಡಿಲ್ಲ. ಇದೀಗ ಗಡಿಗಳಲ್ಲಿ ಪಿಎಲ್‌ಎ ಆತಂಕವನ್ನು ಹೆಚ್ಚಿಸುತ್ತಿದೆ ಎಂದು ಪಾಂಪಿಯೋ ಹೇಳಿದ್ದಾರೆ.
ಯೂರೋಪ್ ದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವುದರ ಹಿಂದೆ ಚೀನಾದ ಕೈವಾಡವಿದೆ. ಯೂರೋಪ್ ಮತ್ತು ಅಮೆರಿಕದ ನಡುವೆ ಸುಳ್ಳು ಸುದ್ದಿ ಮತ್ತು ದುರುದ್ದೇಶಪೂರಿತ ಸೈಬರ್ ದಾಳಿಗಳನ್ನೂ ಮಾಡುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.