ದಂತೇವಾಡ: ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.
ದಂತೇವಾಡ ಹಾಗೂ ಸುಕ್ಮಾ ಗಡಿಯ ಗೊಂಡೆರಾಸ್ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 5 ಗಂಟೆಯಿಂದ ನಕ್ಸಲರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಕಾಳಗ ನಡೆದಿತ್ತು. ನಕ್ಸಲ್ ಕಮಾಂಡರ್ಗಳಾದ ಶ್ಯಾಂ, ದೇವ ಹಾಗೂ ವಿನೋದ್ ಅಡಗಿದ್ದ ಟೆಂಟ್ಗಳ ಮೇಲೆ ಭದ್ರತಾ ಪಡೆಗಳು ಗುಂಡಿನ ಮಳೆಗರೆದಿವೆ. ಈ ವೇಳೆ ಇಬ್ಬರು ನಕ್ಸಲರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದಂತೇವಾಡದ ಎಸ್ಪಿ ಅಭಿಷೇಕ್ ಪಲ್ಲಾವ, ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಹಿಳಾ ಮೀಸಲು ಪಡೆ 'ದಂತೇಶ್ವರಿ ಲಡ್ಕೆ'ಯ ಕಮಾಂಡೋಗಳು ಕೂಡ ಪಾಲ್ಗೊಂಡಿದ್ದರು. ನಕ್ಸಲರ ಪತ್ನಿಯರು ಹಾಗೂ ಮಹಿಳಾ ನಕ್ಸಲರು ಸೇರಿ 13 ಮಂದಿ ಮಹಿಳೆಯರು ಸೆರೆಯಾಗಿದ್ದಾರೆ ಎಂದು ಹೇಳಿದರು.
ನಕ್ಸಲರಿಂದ ಅತ್ಯಾಧುನಿಕ ರೈಫಲ್ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಳಿಸಲಾಗಿದ್ದು, ಕಾರ್ಯಾಚರಣೆ ತೀವ್ರಗೊಂಡಿದೆ.