ಬಸ್ತಾರ್ (ಛತ್ತೀಸ್ಗಢ): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರಿಗೆ ಶರಣಾಗಿದ್ದ 58 ಮಾವೋವಾದಿಗಳು ಸೇರಿದಂತೆ 127 ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದು, ಕಾನ್ಸ್ಟೇಬಲ್ಗಳಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ಛತ್ತೀಸ್ಗಢ ಸರ್ಕಾರದ ನಕ್ಸಲರ ಪುನರ್ವಸತಿ ಯೋಜನೆಯಡಿಯಲ್ಲಿ ಪೊಲೀಸರಿಗೆ ಶರಣಾಗಿದ್ದ ನಕ್ಸಲರು ಪೊಲೀಸ್ ತರಬೇತಿ ಪಡೆದು ಈಗ ಪೊಲೀಸ್ ಪಡೆಯ ಭಾಗವಾಗಿದ್ದಾರೆ. ಇದರಿಂದ ಮಾವೋವಾದಿಗಳಿಗೆ ಹಾಗೂ ಬುಡಕಟ್ಟು ವಿರೋಧಿ ಸಿದ್ಧಾಂತ ಹೊಂದಿದ್ದವರಿಗೆ ಭ್ರಮನಿರಸನವಾಗಿದೆ ಎಂದು ಕಾನ್ಸ್ಟೇಬಲ್ ಆಗಿ ನೇಮಕಗೊಂಡವರು ಹೇಳಿಕೊಂಡಿದ್ದಾರೆ.
ಬುಡಕಟ್ಟು ಸಮುದಾಯದವರ ಬೆಂಬಲವನ್ನು ಪಡೆಯಲು ಬಸ್ತಾರ್ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದರು. ಈಗ ಮಾಜಿ ನಕ್ಸಲರಿಗೆ ಕಾನ್ಸ್ಟೇಬಲ್ಗಳಾಗಿ ಕೆಲಸ ನೀಡುವ ಮೂಲಕ ಉಳಿದ ನಕ್ಸಲರಿಗೆ ಭರವಸೆ ನೀಡುತ್ತಿದ್ದಾರೆ.
ತರಬೇತಿ ಪಡೆದ ನಕ್ಸಲರನ್ನು ಕಾನ್‌ಸ್ಟೇಬಲ್‌ಗಳನ್ನಾಗಿ ಮಾಡಿ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದು ನಮ್ಮ ಧ್ಯೇಯದ ಭಾಗವಾಗಲಿದೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಭಿಷೇಕ್ ಪಲ್ಲವ್ ಹೇಳಿದ್ದಾರೆ.
ಶರಣಾದ ನಕ್ಸಲರನ್ನು 127 ನಕ್ಸಲೈಟ್‌ಗಳನ್ನು ಕಳೆದ 2 ವರ್ಷಗಳಿಂದ ಬೋಧಗಟ್ ಪಿಟಿಎಸ್‌ನಲ್ಲಿ ಇರಿಸಲಾಗಿತ್ತು. ಇದಾದ ನಂತರ 11 ತಿಂಗಳ ಕಠಿಣ ತರಬೇತಿ ನೀಡಲಾಗಿತ್ತು. ಇದರ ಜೊತೆಗೆ ಕಾನೂನು ಮಾಹಿತಿ ಮತ್ತು ಮಾನವ ಹಕ್ಕುಗಳ ತರಬೇತಿಯನ್ನು ನೀಡಿ ಕಾನ್‌ಸ್ಟೇಬಲ್‌ಗಳನ್ನಾಗಿ ನೇಮಿಸಲಾಗಿದೆ ಎಂದು ಡಾ. ಅಭಿಷೇಕ್ ಪಲ್ಲವ್ ಹೇಳಿದ್ದಾರೆ.