ಚೆನ್ನೈ (ತಮಿಳುನಾಡು): ತೀವ್ರ ಗುಡುಗು ಮತ್ತು ಇಂದು ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವಾರು ಭಾಗಗಳಲ್ಲಿ ನೀರು ಹರಿದು, ಜಲಾವೃತಗೊಂಡಿದೆ.
ನಗರದಲ್ಲಿ ಸರಾಸರಿ 97.27 ಮಿ.ಮೀ ಮಳೆಯಾಗಿದ್ದು, 2014ರ ಅಕ್ಟೋಬರ್ ಬಳಿಕ ಅತಿ ಹೆಚ್ಚು ಮಳೆಯಾಗಿದೆ. ವ್ಯಾಸರ್‌ಪಾಡಿ, ಎಗ್ಮೋರ್, ಪಲವಾಕ್ಕಂ, ಪ್ಯಾರಿಸ್ ಸೇರಿದಂತೆ ಪ್ರದೇಶಗಳು, ಕಿಲ್ಪಾಕ್, ಎಂಎಂಡಿಎ ಕಾಲೋನಿ, ತಿರುವನ್ಮಿಯೂರ್ ಪ್ರದೇಶಗಳು ಜಲಾವೃತಗೊಂಡಿವೆ.
ನುಂಗಂಬಕ್ಕಂನಲ್ಲಿ ಇಂದು ಬೆಳಿಗ್ಗೆ 8.30ರವರೆಗೆ ಸುಮಾರು 13 ಸೆಂ.ಮೀ ಮಳೆಯಾಗಿದ್ದರೆ, ಅನ್ನಾ ವಿಶ್ವವಿದ್ಯಾಲಯ (13.4 ಸೆಂ.ಮೀ), ಎನ್ನೋರ್ (8 ಸೆಂ.ಮೀ), ರೆಡ್ ಹಿಲ್ಸ್ (13 ಸೆಂ.ಮೀ), ಸತ್ಯಬಾಮಾ ವಿಶ್ವವಿದ್ಯಾಲಯ (6 ಸೆಂ.ಮೀ) ಮತ್ತು ಮೀನಾಂಬಕ್ಕಂನಲ್ಲಿ (5 ಸೆಂ.ಮೀ) ಭಾರೀ ಮಳೆಯಾಗಿದೆ.
ಮುಂದಿನ ಕೆಲವು ದಿನಗಳವರೆಗೆ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಎಸ್. ಬಾಲಚಂದ್ರನ್ ತಿಳಿಸಿದ್ದಾರೆ.
ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ತೆಂಕಸಿ, ರಾಣಿಪೇಟೆ, ವಿರುಧುನಗರ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.