ಚೆನ್ನೈ (ತಮಿಳುನಾಡು): ಕೋವಿಡ್ ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿ ನಡುವಿನ ಅಂತರವನ್ನು ನಿವಾರಿಸಬಲ್ಲ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚೆನ್ನೈ ಮೂಲದ ಕಂಪನಿಯೊಂದು ಪ್ರಕಟಿಸಿದೆ.
ಕಂಪನಿಯ ಸಿಇಒ ವಿಘ್ನೇಶ್ವರ ಮಾತನಾಡಿ, ಎಟಿಕೋಸ್ ಕೋವಿಡ್ ರೋಗಿಗಳ ಆರೈಕೆ ವ್ಯವಸ್ಥೆಯಲ್ಲಿ ಸ್ಮಾರ್ಟ್ ಬಟನ್ ಬಳಸಿ ರೋಗಿಯು ಆರೋಗ್ಯ ಕಾರ್ಯಕರ್ತರೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು ಎಂದು ಹೇಳಿದರು.
ಯಾವುದೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದರೆ ಅಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಅಟೆಂಡೆಂಟ್‌ಗಳು ಇರುತ್ತಾರೆ. ಕೊರೊನಾ ವೈರಸ್ ಪ್ರಕರಣದಲ್ಲಿ, ಯಾವುದೇ ಅಟೆಂಡೆಂಟ್ ಇರುವುದಿಲ್ಲ. ರೋಗಿಗಳನ್ನು ನೋಡಿಕೊಳ್ಳಲು ಬಯಸುವ ದಾದಿಯರು ಅವರ ಬಳಿಗೆ ಆಗಾಗ್ಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ, ಅವರೂ ಕೂಡಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಈ ಅಂತರವನ್ನು ನಿವಾರಿಸಲು ಈ ಸಾಧನ ಸಹಾಯ ಮಾಡಲಿದೆ ಅವರು ವಿವರಿಸಿದರು.
ಈ ಸಾಧನವನ್ನು ರೋಗಿಗಳಿಗೆ ನೀಡಲಾಗುವುದು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಅವರು ಸಾಧನದಲ್ಲಿರುವ ಬಟನ್ ಒತ್ತಬಹುದು. ರೋಗಿ ಬಟನ್ ಒತ್ತಿದಾಗ ದಾದಿಯರಿಗೆ ರೋಗಿಯ ಹೆಸರು ಹಾಗೂ ಮಾಹಿತಿ ದೊರೆಯಲಿದೆ. ಈ ಸಾಧನದಲ್ಲಿ ಸಿಂಗಲ್ ಪ್ರೆಸ್, ಡಬಲ್ ಪ್ರೆಸ್ ಮತ್ತು ಟ್ರಿಪಲ್ ಪ್ರೆಸ್ ಬಟನ್ ಇದೆ. ಸಿಂಗಲ್ ಪ್ರೆಸ್ ಎಂದರೆ ರೋಗಿಗೆ ನೀರು ಬೇಕು, ಡಬಲ್ ಪ್ರೆಸ್ ಔಷಧಕ್ಕಾಗಿ ಮತ್ತು ಟ್ರಿಪಲ್ ಪ್ರೆಸ್ ತುರ್ತು ಪರಿಸ್ಥಿತಿಗಾಗಿ ಇದೆ ಎಂದರು.
ಈ ವ್ಯವಸ್ಥೆಯ ಮೂಲಕ 100ಕ್ಕೂ ಹೆಚ್ಚು ರೋಗಿಗಳ ಮೇಲ್ವಿಚಾರಣೆ ಮಾಡಬಹುದು. ರೋಗಿಗಳು ಮತ್ತು ದಾದಿಯರ ನಡುವಿನ ಅಂತರವು 1 ಕಿಲೋಮೀಟರ್ವರೆಗೆ ಇರಬಹುದು. ಈ ದೂರವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದರು.
ಇಡೀ ವ್ಯವಸ್ಥೆ 'ಮೇಡ್ ಇನ್ ಇಂಡಿಯಾ' ಎಂದು ವಿಘ್ನೇಶ್ವರ ಹೇಳಿದ್ದು, ಅವರು ಈ ಸಾಧನಕ್ಕೆ ಪೇಟೆಂಟ್ ಸಹ ಪಡೆದಿದ್ದಾರೆ.