ರಾಯ್‌ಪುರ(ಛತ್ತೀಸ್‌ಗಢ): ನೆರೆಯ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರೈತರ ಬೆಳೆಗಳ ಮೇಲೆ ದಾಳಿ ನಡೆಸಿದ ಬಳಿಕ ಇದೀಗ ಮಿಡತೆಗಳ ಹಿಂಡು ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಜವಾರಿಟೋಲಾ ಗ್ರಾಮದಲ್ಲಿ ಪತ್ತೆಯಾಗಿವೆ.
ಈ ಬಗ್ಗೆ ರೈತರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಆಡಳಿತ ಟ್ರ್ಯಾಕ್ಟರ್ಗಳಲ್ಲಿ ಔಷಧಿ ಸಿಂಪಡಿಸುವ ಯಂತ್ರಗಳು ಮತ್ತು ರಾಸಾಯನಿಕ ಸಿಂಪಡಣೆ ಮಾಡಲು ಅಗ್ನಿಶಾಮಕ ದಳವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿದೆ. ಜೊತೆಗೆ ಕೃಷಿ ಇಲಾಖೆ ನಿಯಂತ್ರಣ ಕೊಠಡಿ ಸ್ಥಾಪಿಸಿದ್ದು, ಮಿಡತೆ ಕಂಡು ಬಂದರೆ ರೈತರು ಸಹಾಯವಾಣಿಗೆ ಕರೆ ಮಾಡಿ ತಿಳಿಸಲು ಸೂಚನೆ ನೀಡಿದೆ.
ಕಳೆದ ಮೇ ತಿಂಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಿಂದ ರಾಜಸ್ಥಾನಕ್ಕೆ ಲಗ್ಗೆಯಿಟ್ಟ ಮಿಡತೆಗಳ ಹಿಂಡು, ಬಳಿಕ ಮಧ್ಯಪ್ರದೇಶ ಸೇರಿದಂತೆ ಪಶ್ಚಿಮ ಭಾರತದ ವಿವಿಧ ರಾಜ್ಯಗಳಲ್ಲಿ ಕೃಷಿ ನಾಶಪಡಿಸಿವೆ. ಜೊತೆಗೆ ಮಹಾರಾಷ್ಟ್ರದ ಅಮರಾವತಿ ಮತ್ತು ಮಧ್ಯಪ್ರದೇಶದ ಮಾಂಡ್ಲಾದಲ್ಲೂ ಪ್ರತ್ಯಕ್ಷವಾಗಿವೆ.