ನವದೆಹಲಿ: ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಪಾಲಿಗೆ ಸೋಮವಾರ ಅತ್ಯಂತ ಮಹತ್ವದ ದಿನವಾಗಿದ್ದು, ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಮುಖ್ಯ ನೌಕೆಯಿಂದ ಬೇರ್ಪಡಲಿದೆ.
ಪ್ರಸ್ತುತ ಆರ್ಬಿಟರ್, ಲ್ಯಾಂಡರ್ ಹಾಗೂ ರೋವರ್ ಉತ್ತಮವಾಗಿ ಸ್ಥಿತಿಯಲ್ಲಿದ್ದು, ಇಂದು ಸಂಜೆ ಕೊನೆಯ ಹಂತದ ಕಕ್ಷೆಗೆ ಸೇರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ಮುಖ್ಯಸ್ಥ ಡಾ. ಕೆ.ಸಿವನ್ ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್ ಮುಖ್ಯ ನೌಕೆಯಿಂದ ಬೇರ್ಪಡಲಿದೆ ಎಂದು ಇಸ್ರೋ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಈ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಸೆ. 7ರಂದು ನಡೆಯುವ ಪ್ರಕ್ರಿಯೆಯಷ್ಟೇ ಸವಾಲಿನದ್ದಾಗಿದೆ ಎಂದು ಕೆ.ಸಿವನ್ ವಿವರಿಸಿದ್ದಾರೆ.
ಸೆಪ್ಟೆಂಬರ್ 7ರ ಮುಂಜಾನೆ 1.55ಕ್ಕೆ ಇಸ್ರೋ ಚಂದ್ರನಲ್ಲಿ ಇಳಿಯುವ ಪ್ರಕ್ರಿಯೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದ್ದು, ಇದೇ ಕಾರಣಕ್ಕೆ ಚಂದ್ರಯಾನ-2 ಮಹತ್ವದ ಪಡೆದಿದೆ.
ಚಂದ್ರನಲ್ಲಿ ಯಶಸ್ವಿಯಾಗಿ ಭಾರತ ಇಳಿದರೆ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ(ಅಮೆರಿಕ, ಚೀನಾ, ರಷ್ಯಾ) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಭಾರತವಾಗಲಿದೆ.